ಉದಯವಾಹಿನಿ, ಕೌಲಾಲಂಪುರ: ಇರಾನ್ ಯುದ್ಧದ ಪರಿಣಾಮವಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಕಾಂಡೋಮ್ ದರಗಳು ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಕಾಂಡೋಮ್ ದರಗಳು ಶೇ.20 ರಿಂದ 30 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ವದ ಅತಿದೊಡ್ಡ ಕಾಂಡೋಮ್ ತಯಾರಕ ಸಂಸ್ಥೆಯಾದ ಮಲೇಷ್ಯಾ ಮೂಲದ ಕಾರೆಕ್ಸ್ ತಿಳಿಸಿದೆ. ಈ ಹೆಚ್ಚುವರಿ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ.
ವಿಶ್ವದ ಕಾಂಡೋಮ್ ಮಾರುಕಟ್ಟೆಯ ಬಹುಪಾಲು ಪೂರೈಕೆಯು ಮಲೇಷ್ಯಾದಂತಹ ಆಗ್ನೇಯ ಏಷ್ಯಾದ ದೇಶಗಳಿಂದ ಬರುತ್ತದೆ. ಇರಾನ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರದ ಮಾರ್ಗಗಳಲ್ಲಿ ಸರಕು ಸಾಗಣೆ ಹಡಗುಗಳಿಗೆ ಭದ್ರತೆಯ ಭೀತಿ ಎದುರಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಹಡಗುಗಳು ದೀರ್ಘವಾದ ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದ್ದು, ಸಾಗಾಣಿಕಾ ವೆಚ್ಚ ಮತ್ತು ವಿಮಾ ವೆಚ್ಚ ವಿಪರೀತವಾಗಿ ಹೆಚ್ಚಾಗಿದೆ. ಇದರಿಂದಾಗಿ ಯುರೋಪ್ ಮತ್ತು ಅಮೆರಿಕದಂತಹ ದೇಶಗಳಿಗೆ ಉತ್ಪನ್ನಗಳು ತಲುಪಲು ಮೊದಲಿನ ಅವಧಿಗಿಂತ ದುಪ್ಪಟ್ಟು ಸಮಯ (ಸುಮಾರು 2 ತಿಂಗಳು) ಬೇಕಾಗುತ್ತಿದೆ.
