ಉದಯವಾಹಿನಿ, ಹರಾರೆ : ನೀವು ಆರಾಮವಾಗಿ ಕುಳಿತು ಹೋಟೆಲ್ ಒಂದರಲ್ಲಿ ಆಹಾರ ಸವಿಯುತ್ತಿದ್ದಂತೆ ಮೊಸಳೆ ನುಗ್ಗಿ ಬಂದರೆ ಏನಾಗಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ. ಯಾಕಂದರೆ ಇತ್ತೀಚೆಗೆ ಇದೇ ರೀತಿಯ ಘಟನೆ ಜಿಂಬಾಬ್ವೆಯ ಹೋಟೆಲ್ ಒಂದರಲ್ಲಿ ನಡೆದಿದೆ. ಪ್ರವಾಸಿಗರು ಕುಳಿತು ತಿಂಡಿ ಸವಿಯುತ್ತಿದ್ದಂತೆ ಐಷಾರಾಮಿ ಹೋಟೆಲ್‌ಗೆ 12 ಅಡಿ ಉದ್ದದ ಮೊಸಳೆಯೊಂದು ನುಗ್ಗಿದೆ. ಈ ದೃಶ್ಯ ಕಂಡ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸುಮಾರು 12 ಅಡಿ ಉದ್ದದ ಮೊಸಳೆ ಹೋಟೆಲ್ ಆವರಣದಲ್ಲಿ ಶಾಂತವಾಗಿ ತೆವಳುತ್ತ ಕೌಂಟರ್ ಒಳಗೆ ನುಗ್ಗಿದೆ. ಜಾಂಬೆಜಿ ನದಿ ದಡದಲ್ಲಿರುವ ಈ ಹೋಟೆಲ್‌ಗೆ ಬೆಳಗ್ಗಿನ ಸಮಯದಲ್ಲಿಯೇ ಮೊಸಳೆ ನೇರವಾಗಿ ನುಗ್ಗಿ ಬಂದಿದೆ. ಹೋಟೆಲ್ ಸಿಬ್ಬಂದಿ ತಕ್ಷಣ ಇದನ್ನು ಗಮನಿಸಿ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ವನ್ಯಜೀವಿ ಅಧಿಕಾರಿಗಳಿಗೆ ಕೂಡಲೇ ತಿಳಿಸಿದ್ದಾರೆ. ಆ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದೆ.
