ಉದಯವಾಹಿನಿ, ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಹಾಗೂ ಮಂಗಳೂರು, ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ಬರುವ ಚಾರ್ಮಾಡಿ ಘಾಟ್​​ನ ಮೂರನೇ ತಿರುವಿನಲ್ಲಿ ಖಾಸಗಿ ಬಸ್​ವೊಂದು ಪಲ್ಟಿಯಾಗಿ, 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ತೆರಳಿದ್ದ ತುಮಕೂರು ಜಿಲ್ಲೆಯ ಪಾವಗಡ ಮೂಲದವರು, ಮರಳಿ ಬರುವಾಗ​ ಚಾಲಕನ ನಿಯಂತ್ರಣ ತಪ್ಪಿ ಬಸ್ ಮಗುಚಿ ಬಿದ್ದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಪಾವಗಡವರು ಎಂದು ತಿಳಿದುಬಂದಿದೆ. ಗಾಯಾಳುಗಳಲ್ಲಿ ಎಂಟು ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆ, ಸ್ಥಳೀಯರು ಮತ್ತು ವಾಹನ ಸವಾರರು ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲದೆ, ಸುಮಾರು 5ರಿಂದ 6 ಆಂಬ್ಯುಲೆನ್ಸ್​​ಗಳು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿವೆ. ಗಾಯಾಳುಗಳನ್ನು ಕಕ್ಕಿಂಜೆಯ ಕೃಷ್ಣ ಆಸ್ಪತ್ರೆ ಹಾಗೂ ಬೆಳ್ತಂಗಡಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಈವರೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.ಘಟನಾ ಸ್ಥಳಕ್ಕೆ ಬಣಕಲ್ ಠಾಣೆ ಹಾಗೂ ಚಾರ್ಮಾಡಿ ಘಾಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅವಘಡದಿಂದ ಘಾಟಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡಿದರು.

Leave a Reply

Your email address will not be published. Required fields are marked *

error: Content is protected !!