ಉದಯವಾಹಿನಿ, ವಿಶಾಖಪಟ್ಟಣ : ಇಲ್ಲಿನ ಸೀತಮ್ಮಧಾರಾದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಯ ವೈದ್ಯರು ಅಪರೂಪದ ವೈದ್ಯಕೀಯ ಸಾಧನೆ ಮಾಡಿದ್ದಾರೆ. ಮೆದುಳು ನಿಷ್ಕ್ರಿಯವಾಗಿದ್ದ ದಾನಿಯ ಮೂಳೆಯನ್ನು ಬಳಸುವ ಮೂಲಕ, ಭುಜದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ಸಾಮಾನ್ಯವಾಗಿ ಮೆದುಳು ನಿಷ್ಕ್ರಿಯವಾದ ವ್ಯಕ್ತಿಗಳಿಂದ ಅಂಗಾಂಗಗಳನ್ನು ದಾನವಾಗಿ ಪಡೆದು ಜೀವ ಉಳಿಸುವುದು ಸಾಮಾನ್ಯ. ಆದರೆ, ಹಾನಿಗೊಳಗಾದ ಕೀಲುಗಳನ್ನು ಸರಿಪಡಿಸಲು ಮತ್ತು ಚಲನಶೀಲತೆಯನ್ನು ಮರಳಿ ಪಡೆಯಲು ದಾನಿಯ ಮೂಳೆಯನ್ನು ಬಳಸಿರುವುದು ಅತ್ಯಂತ ಅಪರೂಪದ ವಿದ್ಯಮಾನವಾಗಿದೆ.
ಆಸ್ಪತ್ರೆಯ ಮೂಳೆಚಿಕಿತ್ಸೆ ಮತ್ತು ಅರ್ಥ್ರೋಸ್ಕೋಪಿಕ್ ಸರ್ಜನ್ ಡಾ. ಶ್ರೀನಿವಾಸ್ ಗೊಲ್ಲಾಂಗಿ ಅವರು ತಿಳಿಸಿದಂತೆ, “ಈ ಸಂಕೀರ್ಣ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮೂಳೆ ಬ್ಯಾಂಕ್‌ನಿಂದ ಮೂಳೆಯನ್ನು ತರಿಸಿ, ವಿಶಾಖಪಟ್ಟಣಕ್ಕೆ ಕೊಂಡೊಯ್ಯಲಾಯಿತು. ಅಲ್ಲಿಯ ರೋಗಿಯ ಭುಜದ ನೋವಿಗೆ ಚಿಕಿತ್ಸೆ ನೀಡಲಾಯಿತು” ಎಂದರು.
“ವಿಶಾಖಪಟ್ಟಣದ 40 ವರ್ಷದ ವ್ಯಕ್ತಿಯೊಬ್ಬರು ಕಳೆದ ಹಲವು ವರ್ಷಗಳಿಂದ ಪದೇ ಪದೇ ಭುಜದ ಕೀಲು ಜಾರುವಿಕೆಯಿಂದ ಬಳಲುತ್ತಿದ್ದರು. ಅವರಿಗೆ ಅಪಸ್ಮಾರ (ಮೂರ್ಛೆ ರೋಗ) ಇದ್ದ ಕಾರಣ, ಆಗಾಗ್ಗೆ ಕೆಳಗೆ ಬಿದ್ದು ಭುಜಕ್ಕೆ ಏಟಾಗುತ್ತಿತ್ತು. ಈ ಹಿಂದೆ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಅವರ ದೈನಂದಿನ ಜೀವನ ಬಹಳ ಕಷ್ಟಕರವಾಗಿತ್ತು. ರೋಗಿಯ ತಪಾಸಣೆ ನಡೆಸಿದಾಗ ಅವರ ಭುಜದ ರೋಟೇಟರ್ ಕಫ್ ಸ್ನಾಯುಗಳು ತೀವ್ರವಾಗಿ ಹಾನಿಗೊಳಗಾಗಿದ್ದವು. ಭುಜದ ಮೂಳೆಯ ಒಂದು ಭಾಗ ಸಂಪೂರ್ಣ ಸವೆದು ಹೋಗಿರುವುದು ಕಂಡುಬಂದಿತ್ತು. ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಂದ ಇದಕ್ಕೆ ಶಾಶ್ವತ ಪರಿಹಾರ ಸಾಧ್ಯವಿರಲಿಲ್ಲ” ಎಂದು ಡಾ. ಗೊಲ್ಲಾಂಗಿ ವಿವರಿಸಿದರು.ಶಸ್ತ್ರಚಿಕಿತ್ಸಾ ವಿಧಾನ: “ನಮ್ಮ ವೈದ್ಯಕೀಯ ತಂಡವು ಮೊದಲು ರೋಗಿಯ ಅಪಸ್ಮಾರ ಸಮಸ್ಯೆಯನ್ನು ನಿಯಂತ್ರಣಕ್ಕೆ ತಂದಿತು. ನಂತರ ಬೆಂಗಳೂರಿನಿಂದ ತರಿಸಿದ ದಾನಿಯೊಬ್ಬರ ಮೂಳೆಯನ್ನು ಬಳಸಿ ‘ಆಲೋಗ್ರಾಫ್ಟ್’ ತಂತ್ರಜ್ಞಾನದ ಮೂಲಕ ಭುಜದ ಮೂಳೆ ಪುನರ್ನಿರ್ಮಾಣ ಮಾಡಲಾಯಿತು. ದಾನಿಯ ಅಂಗಾಂಶ ಅಥವಾ ಮೂಳೆಯನ್ನು ಪಡೆದು ಮತ್ತೊಬ್ಬರಿಗೆ ಅಳವಡಿಸುವುದನ್ನು ‘ಆಲೋಗ್ರಾಫ್ಟ್’ ಎಂದು ಕರೆಯಲಾಗುತ್ತದೆ” ಎಂದರು.”ಈ ಶಸ್ತ್ರ ಚಿಕಿತ್ಸೆಯಿಂದ ಸ್ನಾಯುಗಳ ಹಾನಿಯನ್ನು ಸರಿಪಡಿಸಲಾಗಿದೆ. ಜೊತೆಗೆ, ಭುಜಕ್ಕೆ ಅಗತ್ಯವಾದ ಶಕ್ತಿ ಮತ್ತು ಸ್ಥಿರತೆಯನ್ನು ನೀಡಲಾಗಿದೆ. ಸದ್ಯ ರೋಗಿಯು ಗುಣಮುಖರಾಗಿದ್ದು, ತಮ್ಮ ದೈನಂದಿನ ಕೆಲಸಗಳನ್ನು ಸುಗಮವಾಗಿ ಮಾಡಿಕೊಳ್ಳುತ್ತಿದ್ದಾರೆ” ಎಂದು ಡಾ. ಗೊಲ್ಲಾಂಗಿ ಹರ್ಷ ವ್ಯಕ್ತಪಡಿಸಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ಯಶಸ್ವಿ ಆಲೋಗ್ರಾಫ್ಟ್ ಮೂಳೆ ಕಸಿ ಮಾಡಲಾಗಿದ್ದು, ಇದು ಮೂಳೆಚಿಕಿತ್ಸಾ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ವೈದ್ಯರು ಹೇಳಿದರು.
