ಉದಯವಾಹಿನಿ ,  ಇರಾನ್ ಜೊತೆಗಿನ ಉದ್ವಿಗ್ನತೆಯ ಬೆನ್ನಲ್ಲೇ ಅಮೆರಿಕವು ಇಸ್ರೇಲ್‌ಗೆ ಕೇವಲ 24 ಗಂಟೆಗಳಲ್ಲಿ 6,500 ಟನ್ ಯುದ್ಧಸಾಮಗ್ರಿ ಮತ್ತು ಮಿಲಿಟರಿ ಉಪಕರಣಗಳನ್ನು ಪೂರೈಸಿದೆ. ಇಸ್ರೇಲ್ ರಕ್ಷಣಾ ಸಚಿವಾಲಯವು ಏ.30 ರಂದು ಈ ಮಾಹಿತಿಯನ್ನು ನೀಡಿದ್ದು, ಇದು ಇರಾನ್ ಮೇಲಿನ ದಾಳಿಯನ್ನು ಪುನರಾರಂಭಿಸುವ ಸಿದ್ಧತೆಯ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.ಕಳೆದ 24 ಗಂಟೆಗಳಲ್ಲಿ ಎರಡು ಸರಕು ಹಡಗುಗಳು ಮತ್ತು ಹಲವಾರು ಕಾರ್ಗೋ ವಿಮಾನಗಳ ಮೂಲಕ ಸಾವಿರಾರು ವಾಯು ಮತ್ತು ಭೂ ಯುದ್ಧಸಾಮಗ್ರಿಗಳು, ಮಿಲಿಟರಿ ಟ್ರಕ್‌ಗಳು ಮತ್ತು ಜಂಟಿ ಲಘು ಯುದ್ಧ ವಾಹನಗಳನ್ನು ಇಸ್ರೇಲ್ ಸ್ವೀಕರಿಸಿದೆ. ಈ ಸಾಮಗ್ರಿಗಳನ್ನು ಹೈಫಾ ಮತ್ತು ಅಶ್ಡೋಡ್ ಬಂದರುಗಳಲ್ಲಿ ಇಳಿಸಿ ತಕ್ಷಣವೇ ವಿವಿಧ ಮಿಲಿಟರಿ ನೆಲೆಗಳಿಗೆ ಸಾಗಿಸಲಾಗಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು, ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ಶತ್ರುಗಳ ವಿರುದ್ಧ ಪೂರ್ಣ ಬಲದಿಂದ ಕಾರ್ಯಾಚರಣೆ ನಡೆಸಲು ಸಿದ್ಧರಾಗಿರಲು ಈ ಪೂರೈಕೆ ಅತ್ಯಗತ್ಯ ಎಂದು ಹೇಳಿದ್ದಾರೆ.

ಇರಾನ್‌ ವಿರುದ್ಧ ಫೆಬ್ರವರಿ 28 ರಿಂದ ಆಪರೇಷನ್ ರೋರಿಂಗ್ ಲಯನ್ಹೆಸರಿನಲ್ಲಿ ಇಸ್ರೇಲ್‌ ಕಾರ್ಯಾಚರಣೆ ನಡೆಸುತ್ತಿದೆ. ಇರಾನ್ ವಿರುದ್ಧ ಯುದ್ಧ ಆರಂಭವಾದಾಗಿನಿಂದ ಇಲ್ಲಿಯವರೆಗೆ ಇಸ್ರೇಲ್ ಒಟ್ಟು 1,15,600 ಟನ್‌ಗಳಿಗಿಂತ ಹೆಚ್ಚು ಮಿಲಿಟರಿ ಉಪಕರಣಗಳನ್ನು ಅಮೆರಿಕದಿಂದ ಪಡೆದುಕೊಂಡಿದೆ.
ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ತಡೆಯಲು ಮತ್ತು ಅದರ ಕ್ಷಿಪಣಿ ದಾಳಿಗಳಿಗೆ ಪ್ರತಿಕ್ರಿಯಿಸಲು ಅಮೆರಿಕವು ಇಸ್ರೇಲ್‌ಗೆ ನಿರಂತರವಾಗಿ ಬೆಂಬಲ ನೀಡುತ್ತಿದ್ದು, ಈ ಹೊಸ ಪೂರೈಕೆಯು ಯುದ್ಧದ ತೀವ್ರತೆಯನ್ನು ಹೆಚ್ಚಿಸುವ ಮುನ್ಸೂಚನೆ ನೀಡಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವು ಕೇವಲ ತಾಂತ್ರಿಕ ಮಟ್ಟದಲ್ಲಿದ್ದು, ಇಸ್ರೇಲ್ ಯಾವುದೇ ಕ್ಷಣದಲ್ಲಿ ದಾಳಿಯನ್ನು ಪುನರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!