ಉದಯವಾಹಿನಿ , ವಾಷಿಂಗ್ಟನ್‌ : ಇತ್ತೀಚೆಗೆ ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಶಾಲಾ ಬಸ್‌ ಚಲಾಯಿಸುತ್ತಿದ್ದ ಚಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಮೆರೆದು ಬಸ್‌ ನಿಯಂತ್ರಿಸಿ ಹಲವರ ಪ್ರಾಣ ಉಳಿಸಿದ್ದಾರೆ. ಬೆಳಗ್ಗೆ ಶಾಲಾ ಬಸ್ ಚಾಲಕಿ ಲಿಯಾ ಟೇಲರ್ ವಿದ್ಯಾರ್ಥಿಗಳನ್ನು ಸಾಗಿಸುವಾಗ ಈ ಘಟನೆ ನಡೆದಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ವಿದ್ಯಾರ್ಥಿಗಳ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಹ್ಯಾನ್‌ಕಾಕ್ ಕೌಂಟಿ ಶಾಲೆ ಬಿಡುಗಡೆ ಮಾಡಿದ ಸಿಸಿಟಿವಿ ಕ್ಯಾಮರಾ ದೃಶ್ಯದಲ್ಲಿ ಚಾಲಕಿ ಕುಸಿದು ಬೀಳುತ್ತಿರುವುದು ಕಂಡು ಬಂದಿದೆ. ಈ ವೇಳೆ ನಿಯಂತ್ರಣವಿಲ್ಲದೆ ಬಸ್‌ ರಸ್ತೆಯಲ್ಲಿ ಸಾಗುತ್ತಿತ್ತು. ಕೂಡಲೇ ವಿದ್ಯಾರ್ಥಿಯೊಬ್ಬ ಧಾವಿಸಿ ತಕ್ಷಣ ಸ್ಟೀರಿಂಗ್ ಹಿಡಿದಿದ್ದಾನೆ. ಈ ದೃಶ್ಯ ನಿಜಕ್ಕೂ ಮೈ ಜುಮ್ಮೆನಿಸುವಂತಿದೆ.
ಬಸ್‌ ಚಾಲಕಿ ವಿದ್ಯಾರ್ಥಿಗಳನ್ನು ಕೊಂಡೊಯ್ಯುವಾಗ ತೀವ್ರ ಅಸ್ತಮಾಕ್ಕೆ ಒಳಗಾಗಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಮುಂಭಾಗದ ಸೀಟ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬ ತಕ್ಷಣ ಏನೋ ತಪ್ಪಾಗಿದೆ ಎಂದು ಅರಿತಿದ್ದಾನೆ. ಒಬ್ಬ ಹುಡುಗ ಚಾಲಕನ ಸೀಟಿಗೆ ಧಾವಿಸಿ ಬ್ರೇಕ್ ಒತ್ತಿ, ಬಸ್ ಅನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾನೆ. ಅದೇ ಸಮಯದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಚಾಲಕಿಗೆ ಔಷಧ ನೀಡಲು ಸಹಾಯ ಮಾಡಿದ್ದಾನೆ. ಇತರರು ಕರೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅವರ ತ್ವರಿತ ಕ್ರಮಗಳು ವಾಹನದಲ್ಲಿದ್ದ ಸುಮಾರು ವಿದ್ಯಾರ್ಥಿಗಳ ಪ್ರಾಣ ಕಾಪಾಡಿದ್ದು ಗಂಭೀರ ಅಪಘಾತವನ್ನು ತಪ್ಪಿಸಿದೆ. ಹ್ಯಾನ್‌ಕಾಕ್ ಮಿಡಲ್ ಸ್ಕೂಲ್ ಪ್ರಾಂಶುಪಾಲರಾದ ಮೆಲಿಸ್ಸಾ ಸೌಸಿಯರ್ ವಿದ್ಯಾರ್ಥಿಗಳ ಸಮಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಸಾಹಸ ಮೆರೆದ ವಿದ್ಯಾರ್ಥಿಗಳಾದ ಮೆಕೆಂಜಿ ಫಿಂಚ್, ಜಾಕ್ಸನ್ ಕ್ಯಾಸ್ನೇವ್, ಡೇರಿಯಸ್ ಕ್ಲಾರ್ಕ್, ಕೇಲಿ ಕ್ಲಾರ್ಕ್ ಮತ್ತು ಡೆಸ್ಟಿನಿ ಕಾರ್ನೆಲಿಯಸ್ ಅವರನ್ನು‌ ಶಾಲೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!