ಉದಯವಾಹಿನಿ, ನವದೆಹಲಿ : ಭಾರೀ ಕುತೂಹಲ ಮೂಡಿಸಿರುವ ದೆಹಲಿ ಸೇವಾ ಮಸೂದೆ ಹಾಗೂ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಬೆಂಬಲ ನೀಡುವ ಸಾಧ್ಯತೆ ಬಹುತೇಕ ಅಂತಿಮಗೊಂಡಿದೆ. ಲೋಕಸಭೆ ಮೂವರು ಹಾಗೂ ರಾಜ್ಯಸಭೆಯಲ್ಲಿ ಒಬ್ಬ ಸಂಸದರ ಬಲವನ್ನು ಟಿಡಿಪಿ ಹೊಂದಿದೆ.
ಲೋಕಸಭೆಯಲ್ಲಿ ಮಂಡಿಸಲಾದ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ, ೨೦೨೩, ದೆಹಲಿಯಲ್ಲಿ ಅಧಿಕಾರಶಾಹಿಯ ಮೇಲೆ ಕೇಂದ್ರವು ನಿಯಂತ್ರಣ ಪಡೆಯುವ ನಿಟ್ಟಿನಲ್ಲಿ ಮೇ ೧೯ ರಂದು ಹೊರಡಿಸಲಾದ ಸುಗ್ರೀವಾಜ್ಞೆಯನ್ನು ಬದಲಿಸಲು ಯತ್ನದಲ್ಲಿದೆ. ಇನ್ನು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಮತ್ತು ಬಿಜು ಜನತಾ ದಳ (ಬಿಜೆಡಿ) ಬೆಂಬಲ ನೀಡಿದ ಕೆಲವು ದಿನಗಳ ನಂತರ ಇದೀಗ ಟಿಡಿಪಿ ಬೆಂಬಲದೊಂದಿಗೆ ಕೇಂದ್ರವು ರಾಜ್ಯಸಭೆಯಲ್ಲಿ ೧೨೪ ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಪ್ರತಿಪಕ್ಷಗಳ ಭಾರೀ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಯಾಗಿದ್ದರೂ ಬುಧವಾರ ಕೆಳಮನೆಯಲ್ಲಿ ದೆಹಲಿ ಸೇವಾ ಮಸೂದೆ ಚರ್ಚೆಗೆ ಬರಲಿಲ್ಲ. 
