ಉದಯವಾಹಿನಿ, ಚೆನ್ನೈ(ತಮಿಳುನಾಡು): ತಮಿಳುನಾಡಿನ ಕ್ಷಿಪ್ರ ರಾಜಕೀಯ ಬದಲಾವಣೆಯಲ್ಲಿ ಜನಪ್ರಿಯ ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಭರ್ಜರಿ ಸಾಧನೆ ಮಾಡಿದೆ. 100ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸಾಂಪ್ರದಾಯಿಕ ಪಕ್ಷಗಳಾದ ಡಿಎಂಕೆ, ಎಡಿಎಂಕೆಗಳನ್ನು ಧೂಳೀಪಟ ಮಾಡಿದೆ. ಈ ಮೂಲಕ ಏಕಾಂಗಿಯಾಗಿ ಮ್ಯಾಜಿಕ್ ನಂಬರ್ನತ್ತ(118) ಅವರ ಪಕ್ಷ ಮುನ್ನುಗ್ಗುತ್ತಿದೆ.
ನಿಜವಾದ ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಭವಿಷ್ಯ: ನಟನೆಯಿಂದ ಜನಮಾನಸದಲ್ಲಿ ಪ್ರಭಾವ ಬೀರಿ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಜಯ್ ಈಗ ರಾಜಕೀಯದಲ್ಲೂ ವಿಜಯದ ಹೊಸ್ತಿಲಲ್ಲಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಆ್ಯಕ್ಸಿಸ್ ಮೈ ಇಂಡಿಯಾ ಹೊರತಾಗಿ ಯಾವುದೇ ಸಮೀಕ್ಷೆಗಳು ವಿಜಯ್ ಅವರಿಗೆ ಅಧಿಕಾರ ಹಿಡಿಯುವಷ್ಟು ಸ್ಥಾನ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದವು. ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’: ಆದರೆ, ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿರುವ ವಿಜಯ್ ತಾನೊಬ್ಬನೇ ಏಕಾಂಗಿಯಾಗಿ ನಿಂತು ಪಕ್ಷವನ್ನು ಅಧಿಕಾರದ ಗದ್ದುಗೆಯ ಸನಿಹದಲ್ಲಿ ನಿಲ್ಲಿಸಿದ್ದಾರೆ. ಡಿಎಂಕೆ ನೇತೃತ್ವದ ಸರ್ಕಾರದ ಅಡ್ಡಿ, ಜನನಾಯಕ ಸಿನಿಮಾ ವಿವಾದ, ವೈಯಕ್ತಿಕ ಜೀವನದಲ್ಲಿನ ಸಮಸ್ಯೆಗಳೆಲ್ಲವನ್ನೂ ಮೆಟ್ಟಿನಿಂತ ವಿಜಯ್ ಅಮೋಘ ಗೆಲುವಿನ ಸಂಭ್ರಮದಲ್ಲಿದ್ದಾರೆ.
ಮತವಾಗಿ ಬದಲಾದ ಅಭಿಮಾನ!: ಸದ್ಯದ ಟ್ರೆಂಡ್ನ ಪ್ರಕಾರ, ವಿಜಯ್ರ ಟಿವಿಕೆ 106 ಸ್ಥಾನ, ಎಡಿಎಂಕೆ 64, ಡಿಎಂಕೆ 43, ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಸ್ಪಷ್ಟ ಬಹುಮತಕ್ಕೆ ಬೇಕಾದ 118ಕ್ಕೆ ವಿಜಯ್ಗೆ ಇನ್ನೂ 12 ಸ್ಥಾನಗಳು ಬೇಕಾಗಿವೆ. ವಿಜಯ್ ಹೊರತಾಗಿ ಯಾವುದೇ ಪಕ್ಷಗಳು ದೊಡ್ಡ ಯಶಸ್ಸು ಸಾಧಿಸಿಲ್ಲ. ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
