ಉದಯವಾಹಿನಿ, ಮಡಿಕೇರಿ: ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಆಟೋ ಚಾಲಕನೋರ್ವನ ಮೇಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಪುತ್ರರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಡೆದಿದೆ.ಹಲ್ಲೆಗೊಳಗಾದ ಆಟೋ ಚಾಲಕ, ಝಕರಿ ಎಂಬಾತನ ಸ್ಥಿತಿ ಗಂಭೀರವಾಗಿದೆ. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಎಂಬುವವರ ಪುತ್ರರು ಆಟೋ ಚಾಲಕನನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.
ತೀವ್ರ ರಕ್ತಸ್ರಾವದಿಂದ ಚರಂಡಿಯಲ್ಲಿ ಬಿದ್ದಿದ್ದ ಚಾಲಕನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಗಳು ಮೊದಲು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ, ಆತನನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಚಾಲಕ ಮೃತಪಟ್ಟಿದ್ದಾನೆಂದು ಭಾವಿಸಿ ಆತನನ್ನು ಚರಂಡಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ.ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳಾದ ನಾಫಿ ಮತ್ತು ಸಿದ್ದಿಕ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು ಎಂದು ತಿಳಿದುಬಂದಿದೆ. ಈ ಹಿಂದೆ ಬಲ್ಲಮಾವಟಿಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದ ಸಂದರ್ಭದಲ್ಲಿ ಬೆಟ್ಟಿಂಗ್ ಕಟ್ಟುವ ವಿಚಾರವಾಗಿ ಗೌತಮ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇವರು ಜೈಲು ಸೇರಿದ್ದರು. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!