ಉದಯವಾಹಿನಿ, ಕೋಲ್ಕತ್ತಾ: ಮನೆಗೆಲಸ ಮಾಡಿಕೊಂಡು ತಿಂಗಳಿಗೆ 2,500 ರೂ. ಸಂಪಾದನೆ ಮಾಡುತ್ತಿದ್ದ ಮಹಿಳೆಗೆ ಬಂಗಾಳ ಚುನಾವಣೆಯಲ್ಲಿ ಅದೃಷ್ಟ ಖುಲಾಯಿಸಿದೆ. ಬಿಜೆಪಿ (BJP) ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಕಲಿತಾ ಮಾಝಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
ಕಲಿತಾ ಮಾಝಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಆಸ್ಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 12,535 ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸಿ ಶಾಸಕಿಯಾಗಿದ್ದಾರೆ. ಸಾಧಾರಣ ಹಿನ್ನೆಲೆಯಿಂದ ಬಂದ ಮಾಝಿ ಆರ್ಥಿಕ ಸಂಕಷ್ಟದಿಂದಾಗಿ ಬಾಲ್ಯದಲ್ಲೇ ಶಿಕ್ಷಣವನ್ನು ತ್ಯಜಿಸಬೇಕಾಯಿತು. ತನ್ನ ಕುಟುಂಬವನ್ನು ಪೋಷಿಸಲು, ಅವರು ಅನೇಕ ಮನೆಗಳಲ್ಲಿ ಕೆಲಸ ಮಾಡಿದರು. ಅವರ ಪತಿ ಪ್ಲಂಬರ್ ಆಗಿ ಜೀವನ ಸಾಗಿಸುತ್ತಾರೆ. ಇವರಿಗೆ ಒಬ್ಬ ಮಗನಿದ್ದು, 8ನೇ ತರಗತಿ ಓದುತ್ತಿದ್ದಾನೆ.
ಕಳೆದ ಒಂದು ದಶಕದಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಮಾಝಿ, ಬೂತ್ ಮಟ್ಟದ ಕಾರ್ಯಕರ್ತೆಯಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವರನ್ನು ಕಣಕ್ಕಿಳಿಸಿತ್ತು. ಅಲ್ಲಿ ಅವರು ಸುಮಾರು ಶೇ.41 ರಷ್ಟು ಮತಗಳನ್ನು ಪಡೆದರು. ಈ ಹಿಂದೆ 2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಬಿಜೆಪಿ ನಾಯಕತ್ವವು ಅವರ ಮೇಲೆ ಮತ್ತೆ ನಂಬಿಕೆ ಇರಿಸಿ, 2026 ರಲ್ಲಿ ಎರಡನೇ ಬಾರಿ ಟಿಕೆಟ್‌ ನೀಡಿತ್ತು. ಕೊನೆಗೂ ಮಹಿಳೆ ಗೆದ್ದು ಬೀಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!