ಉದಯವಾಹಿನಿ, ಇಟಾ(ಉತ್ತರ ಪ್ರದೇಶ): ನಾಗ್ಲಾ ಭೀಮ್ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಧುವಿನ ಸೋದರಸಂಬಂಧಿಯ ಎದೆಗೆ ಗುಂಡು ಹಾರಿಸಲಾಗಿದೆ. ಮರ್ಹಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿ ಬುಧವಾರ ಚರಣ್ ಸಿಂಗ್ ಅವರ ಪುತ್ರಿ ಆರತಿ ಅವರ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಯಾವ ಹಾಡುಗಳನ್ನು ನುಡಿಸಬೇಕು ಎಂಬ ವಿಚಾರವಾಗಿ ನಡೆದ ಗದ್ದಲದಿಂದಾಗಿ ಈ ಕೃತ್ಯ ನಡೆದಿದೆ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಾಸ್ಗಂಜ್ ಜಿಲ್ಲೆಯ ಸೊರೊನ್ ಗೇಟ್ ಪ್ರದೇಶದಿಂದ ‘ಬರಾತ್’ ನೊಂದಿಗೆ ಬಂದಿದ್ದ ವಧುವಿನ ಕಡೆಯವರು ಮತ್ತು ವರನ ಸಂಬಂಧಿಕರ ನಡುವೆ ಡಿಜೆಯಲ್ಲಿ ಯಾವ ಹಾಡನ್ನು ನುಡಿಸಬೇಕು ಎಂಬ ವಿಚಾರವಾಗಿ ಗಲಾಟೆ ನಡೆದಿದೆ. ಮದುವೆ ಮನೆಯಲ್ಲಿ ಡಿಜೆ ಹಾಡಿನ ವಿಚಾರವಾಗಿ ಗಂಡು ಮತ್ತು ಹೆಣ್ಣಿನ ಕಡೆಯವರ ನಡುವೆ ನಡೆದ ಗಲಾಟೆಯಲ್ಲಿ ವಧುವಿನ ಸಹೋದರ ಸಂಬಂಧಿ ಯುವತಿಗೆ ಗುಂಡು ಹಾರಿಸಲಾಗಿದೆ. ಯುವತಿ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ವಧು ಮತ್ತು ವರನ ಸಂಬಂಧಿಕರ ಬರಾತ್ (ವರನ ಮೆರವಣಿಗೆ) ಕಾರ್ಯಕ್ರಮ ವೇಳೆ ಡಿಜೆ ಹಾಡನ್ನು ಹಾಕಲಾಗಿತ್ತು. ಈ ಹಾಡಿನ ವಿಚಾರಕ್ಕೆ ಉಂಟಾದ ಗಲಾಟೆಯಲ್ಲಿ, ಗಂಡಿನ ಕಡೆಯ ಯುವಕನೊಬ್ಬ ಕಂಟ್ರಿ ಪಿಸ್ತೂಲ್ನಿಂದ ವಧುವಿನ ಸಹೋದರಿಯ ಎದೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ.
ಗುಂಡಿನ ದಾಳಿ ನಡೆದ ತಕ್ಷಣವೇ ಗಾಯಗೊಂಡಿದ್ದ ಯುವತಿಯನ್ನು ಆಲಿಗಢದ ವರುಣ್ ಟ್ರಾಮಾ ಕೇಂದ್ರಕ್ಕೆ ದಾಖಲಿಸಲಾಯಿತು. ಗುಂಡಿನ ದಾಳಿಯಿಂದಾಗಿ ಯುವತಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಈ ಘಟನೆ ಬೆನ್ನಲ್ಲೇ ವಧುವಿನ ಕುಟುಂಬಸ್ಥರು ಈ ಮದುವೆಯನ್ನು ಮುಂದುವರೆಸಲು ನಿರಾಕರಿಸಿದ್ದು, ಮದುವೆ ಮೆರವಣಿಗೆಯನ್ನು ವಾಪಸ್ ಕಳುಹಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.ಘಟನೆ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಕೆಕೆ ಲೋತಿ, ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಓರ್ವನನ್ನು ವಿಷ್ಣು ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಬೆನ್ನಲ್ಲೇ ಮದುವೆಯನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.ಈ ನಡುವೆ ದಾಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಸೂಪರಿಟೆಂಡೆಂಟ್ ಶ್ವೇತಬ್ ಪಾಂಡೆ ಮಾಹಿತಿ ಒದಗಿಸಿದ್ದಾರೆ.
