ಉದಯವಾಹಿನಿ, ಜುನಾಗಢ (ಗುಜರಾತ): ಇಂದು ವಿಶ್ವ ಕತ್ತೆಗಳ ದಿನ. ಪ್ರತಿ ವರ್ಷ ಮೇ 8 ರಂದು ವಿಶ್ವ ಕತ್ತೆ ದಿನವನ್ನು ಆಚರಿಸಲಾಗುತ್ತದೆ. 2018 ರಲ್ಲಿ, ಡಾ. ರಾಝಿಕ್ ಆರ್ಕ್ ಎಂಬ ವಿಜ್ಞಾನಿ ವಿಶ್ವ ಕತ್ತೆ ದಿನ ಆಚರಣೆಯನ್ನು ಪ್ರಾರಂಭಿಸಿದರು. ಮರುಭೂಮಿ ಪ್ರಾಣಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಡಾ. ಆರ್ಕ್, ಕತ್ತೆಗಳ ಕುರಿತು 30 ವರ್ಷಗಳಿಗೂ ಹೆಚ್ಚು ಕಾಲ ಸಂಶೋಧನೆ ನಡೆಸಿದ್ದರು. ಸಂಶೋಧನೆ ಬಳಿಕ ತಾವು ಕಂಡ ಕೆಲವು ಸತ್ಯಗಳನ್ನು ಸ್ಮರಿಸುವ ಹಿನ್ನೆಲೆ ವಿಶ್ವ ಕತ್ತೆ ದಿನವನ್ನಾಗಿ ಘೋಷಿಸಿದರು.ವಿಶ್ವ ಕತ್ತೆ ದಿನ ಮತ್ತು ಪ್ರಾಣಿಗಳ ಮಹತ್ವ: ಇತಿಹಾಸದುದ್ದಕ್ಕೂ, ಕತ್ತೆಗಳು ಮಾನವ ನಾಗರಿಕತೆಗೆ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿವೆ. ಕೃಷಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಸರಕುಗಳ ಸಾಗಣೆಗೆ ಅವುಗಳ ಪಾತ್ರ ದೊಡ್ಡದಿದೆ. ನಿಷ್ಠಾವಂತ ಪ್ರಾಣಿ ಕುಲಕ್ಕೆ ಸೇರಿದ ಕತ್ತೆಗಳು, ಸಾರಿಗೆ, ನಿರ್ಮಾಣ, ಕೃಷಿ ಮತ್ತು ಯುದ್ಧದಂತಹ ಸಂದರ್ಭದಲ್ಲಿ ಇವುಗಳ ಬಳಕೆ ಹೆಚ್ಚು. ಇಂದು ಕೂಡ ಅವುಗಳು ಪ್ರಪಂಚದಾದ್ಯಂತದ ಮಾನವ ಚಟುವಟಿಕೆಯ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎನ್ನುವುದು ಗಮನಾರ್ಹ.
ವಿಶ್ವಾದ್ಯಂತ ಇಂದು, ವಿವಿಧ ರೀತಿಯ 40 ರಿಂದ 50 ಮಿಲಿಯನ್ ಕತ್ತೆಗಳಿವೆ ಎಂದು ಅಂದಾಜಿಸಲಾಗಿದೆ. ಕತ್ತೆಗಳು ಜನರ ಉದ್ಯೋಗ ಮತ್ತು ಜೀವನೋಪಾಯದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಈ ಪ್ರಾಣಿಯನ್ನು ಇಂದು ಸರಕುಗಳನ್ನು ಸಾಗಿಸಲು, ನೀರು ತರಲು, ಕೃಷಿ ಮಾಡಲು ಮತ್ತು ಕೆಲವು ಧಾರ್ಮಿಕ ಸ್ಥಳಗಳಲ್ಲಿ, ಜನರನ್ನು ಕಡಿದಾದ ಇಳಿಜಾರುಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಸಾಗಿಸಲು ಬಳಸಲಾಗುತ್ತದೆ. ಆದರೆ, ಅವುಗಳ ಸಂಖ್ಯೆ ಪ್ರತಿ ವರ್ಷ ಕಡಿಮೆಯಾಗುತ್ತಿದೆ ಎನ್ನುವುದು ಬೇಸರದ ಸಂಗತಿ. ಒಂದು ಅಂದಾಜಿನ ಪ್ರಕಾರ, ಚೀನಾದಲ್ಲಿ ಕತ್ತೆ ಚರ್ಮದಿಂದ ಜೆಲಾಟಿನ್ ಅನ್ನು ಹೊರತೆಗೆಯಲಾಗುತ್ತದೆಂತೆ. ಅಲ್ಲದೇ, ಅದರಿಂದ ಔಷಧವನ್ನು ಸಹ ತಯಾರಿಸಲಾಗುತ್ತಿದೆಯಂತೆ. ಇದಕ್ಕಾಗಿ, ಚೀನಾ ಆಫ್ರಿಕಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಹಾಗಾಗಿ ಆಫ್ರಿಕನ್ ಉಪಖಂಡದಲ್ಲಿ ಕತ್ತೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಕೇವಲ ಮೂರು ಕತ್ತೆಗಳು: ಗುಜರಾತಿನಲ್ಲಿ ಬರುವ ಗೊಲ್ಲ ರಾಣಾ ಎಂಬ ಕುಟುಂಬಗಳು ಕತ್ತೆ ಸಾಕಣೆ ಮತ್ತು ಸಂಬಂಧಿತ ವ್ಯವಹಾರಗಳನ್ನು ನೋಡಿಕೊಂಡು ಬರುತ್ತಿದ್ದವು ಎನ್ನುವುದು ಇತಿಹಾಸ. ಆದರೆ, ಸದ್ಯ ಜುನಾಗಢದಲ್ಲಿ ಅನೇಕ ರಾಣಾ ಕುಟುಂಬಗಳಿವೆಯಾದರೂ ಇಂದು ಒಂದು ಕುಟುಂಬದಲ್ಲಿ ಕೇವಲ ಮೂರೇ ಮೂರು ಕತ್ತೆಗಳು ಮಾತ್ರ ಇವೆ ಎನ್ನುವುದು ಅಚ್ಚರಿ ಸಂಗತಿ. ಭವಿಷ್ಯದಲ್ಲಿ ಅವುಗಳನ್ನು ಜುನಾಗಢ ನಗರದಲ್ಲಿ ಕಾಣದೇ ಇರಬಹುದು. ಒಂದು ಕಾಲದಲ್ಲಿ, ಜುನಾಗಢದಲ್ಲಿರುವ ರಾಣಾ ಕುಟುಂಬವು 50ಕ್ಕೂ ಹೆಚ್ಚು ಕತ್ತೆಗಳನ್ನು ಹೊಂದಿತ್ತು. ಆಗ ಇದೊಂದು ಉದ್ಯೋಗವೂ ಆಗಿತ್ತು. ಆದರೆ, ಇಂದು ಕತ್ತೆಗಳಿಂದ ಉತ್ಪತ್ತಿಯಾಗುವ ಉದ್ಯೋಗವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಜುನಾಗಢ ನಗರದಲ್ಲಿ ಕತ್ತೆಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರು.
ಒಂದು ಕತ್ತೆಯ ಬೆಲೆ ದಿನಕ್ಕೆ 150 ರೂ.: ಇಂದು, ಒಂದು ಕತ್ತೆಯ ಮೌಲ್ಯ ದಿನಕ್ಕೆ 150 ರೂಪಾಯಿಗಳೆಂದು ಅಂದಾಜಿಸಲಾಗಿದೆ. ಕತ್ತೆಗಳಿಂದ ಉತ್ಪತ್ತಿಯಾಗುವ ಉದ್ಯೋಗವು ಕಡಿಮೆಯಾಗುತ್ತಿದೆ. ಆದ್ದರಿಂದ ಅವುಗಳನ್ನು ನಿರ್ವಹಿಸುವುದು ಹೆಚ್ಚು ಕಷ್ಟಕರವಾಗುತ್ತಿದೆ. ಎರಡು ದಶಕಗಳ ಹಿಂದೆ, ನವಾಬಿ ನಗರ ಎಂದು ಕರೆಯಲ್ಪಡುವ ಜುನಾಗಢದಲ್ಲಿ, ಕತ್ತೆಗಳು ಸಾರಿಗೆಯ ಏಕೈಕ ಸಾಧನವಾಗಿದ್ದವು. ವಿಶೇಷವಾಗಿ ನಿರ್ಮಾಣ ವಲಯದಲ್ಲಿ. ಸಿಮೆಂಟ್, ಮರಳು, ಜಲ್ಲಿಕಲ್ಲು, ನೀರು ಮತ್ತು ಕಲ್ಲುಗಳಂತಹ ನಿರ್ಮಾಣ ಸಾಮಗ್ರಿಗಳನ್ನು ಕಿರಿದಾದ ಬೀದಿಗಳ ಮೂಲಕ ಸಾಗಿಸಲು ಕತ್ತೆಗಳನ್ನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ. ಆಗ ಕತ್ತೆಗಳಿಂದ ಉತ್ಪತ್ತಿಯಾಗುವ ಉದ್ಯೋಗವು ಸಾಕಷ್ಟು ಗಣನೀಯವಾಗಿತ್ತು. ಆದರೆ, ಇಂದು, ಕತ್ತೆ ಉದ್ಯೋಗವು ಸಂಪೂರ್ಣವಾಗಿ ನಿಂತುಹೋಗಿದೆ. ಇದರಿಂದಾಗಿ ರಾಣಾ ಕುಟುಂಬಕ್ಕೆ ಕತ್ತೆಯ ನಿರ್ವಹಣಾ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕತ್ತೆಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ಹೇಳಾಗುತ್ತಿದೆ.
