ಉದಯವಾಹಿನಿ, ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ – ಉಕ್ರೇನ್ ನಡುವೆ 3 ದಿನಗಳ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದ್ದಾರೆ. ಮೇ 9ರಿಂದ 11ರವೆಗೆ ಕದನ ವಿರಾಮ ಘೋಷಿಸಲಾಗಿದೆ. ಉಭಯದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಮೇ.9ರಿಂದ ಮೇ.11ರವರೆಗೆ 3 ದಿನಗಳ ಕದನವಿರಾಮ ಘೋಷಿಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಶಿಯಲ್ ಮೂಲಕ ಘೋಷಣೆ ಮಾಡಿದ್ದಾರೆ. ಈ ಕುರಿತು ಟ್ರೂತ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 2ನೇ ಮಹಾಯುದ್ಧದ ಕುರಿತಂತೆ ರಷ್ಯಾದಲ್ಲಿ ವಿಜಯ ದಿನವನ್ನು ಆಚರಿಸಲಾಗುತ್ತಿದ್ದು,ಯುದ್ಧದಲ್ಲಿ ಭಾಗಿಯಾಗಿದ್ದ ಉಕ್ರೇನ್‌ನಲ್ಲಿಯೂ ಆಚರಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನನ್ನ ಕೋರಿಕೆಯ ಮೇರೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಇಬ್ಬರೂ ಸಹ ಯುದ್ಧಕ್ಕೆ ಮೂರು ದಿನಗಳ ಕದನವಿರಾಮ ಜಾರಿ ಮಾಡಲು ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಘೋಷಿಸಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಕದನವಿರಾಮದ ಸಮಯದಲ್ಲಿ ಉಭಯದೇಶಗಳ ನಡುವಿನ ಎಲ್ಲಾ ರೀತಿಯ ಚಲನಶೀಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದರ ಜೊತೆಗೆ ಪರಸ್ಪರ ಎರಡೂ ದೇಶಗಳಲ್ಲಿ ಬಂಧಿಸಲಾಗಿರುವ ಯುದ್ಧ ಕೈದಿಗಳ ಪೈಕಿ ಪ್ರತಿದೇಶದಿಂದ 1,000 ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ.
