
ಉದಯವಾಹನಿ ಅರಸೀಕೆರೆ : ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ದ ವತಿಯಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ 30 ವರ್ಷಗಳ ನೆನಪಿನ ಪ್ರಯುಕ್ತ” ಪಂಚಾಯತ್ ರಾಜ್- 30 ಒಂದು ಅವಲೋಕನ ಹಾಗೂ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ವಿಕೇಂದ್ರೀಕೃತ ತರಬೇತಿ ಸಂಯೋಜಿಕರುಗಳ ಸಮಾವೇಶ”ವನ್ನು ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಆರ್‌ಡಿಪಿಆರ್ ಇಲಾಖೆಯ ಆಯುಕ್ತರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಐಎಎಸ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಪಂಚಾಯತ್ ರಾಜ್ ವ್ಯವಸ್ಥೆಯು ತಳಮಟ್ಟದ ಜನರ ಉನ್ನತಿ, ಅಭಿವೃದ್ಧಿಯಲ್ಲಿ ಅವರು ಪಾಲ್ಗೊಳ್ಳುವಿಕೆ ಮುಖ್ಯವಾದ ಅಂಶದಿಂದ ಜಾರಿಗೆ ಬಂದಿದ್ದು, ಸ್ಥಳೀಯ ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಕಾಯ್ದೆ, ಕಾನೂನುಗಳನ್ನು ಸ್ಥಳೀಯ ಭಾಷೆಯಲ್ಲಿ ತರಬೇತಿ ನೀಡಿ ಸಾಮರ್ಥ್ಯ ಅಭಿವೃದ್ಧಿಗೊಳಿಸುವಲ್ಲಿ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರನ್ನು ಇನ್ನಿತರ ಗ್ರಾಮ ಪಂಚಾಯಿತಿಗಳಿಗೆ ಕ್ಷೇತ್ರ ಭೇಟಿ ಮಾಡಿ ಪರಸ್ಪರ ಅಭಿವೃದ್ಧಿ, ಅವಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ನಂತರ ಚಾಮರಾಜನಗರ ಜಿಲ್ಲಾಧಿಕಾರಿಗಳಾದ ಶಿಲ್ಪನಾಗ್ ಐಎಎಸ್ ಇವರು ಮಾತನಾಡಿ ದೇಹದ ಅಂಗಾಂಗಗಳಲ್ಲಿ ಹೃದಯದ ಪ್ರಾಮುಖ್ಯತೆ ಹೇಗೋ ,ಅದೇ ರೀತಿ ರಾಜ್ಯದ ಅಭಿವೃದ್ಧಿಯಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕಾರ್ಯ,ಮಹತ್ವ ಮತ್ತು ಪ್ರಾಮುಖ್ಯತೆಯಿಂದ ಕೂಡಿದೆ ಎಂದು ತಿಳಿಸಿದರು. ನಂತರ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀ ಪ್ರಿಯ ಐಎಎಸ್ ಯವರು ಮಾತನಾಡಿ ರಾಜ್ಯದ ಪ್ರತಿಯೊಂದು ತಾಲೂಕುಗಳ ಸಾಮರ್ಥ್ಯ ಸೌಧದಲ್ಲಿ ಒಬ್ಬ ನೋಡಲು ವಿಕೇಂದ್ರೀಕೃತ ಸಂಯೋಜಕರನ್ನು ನೇಮಕ ಮಾಡಲಾಗಿದೆ.ಸಾಮರ್ಥ್ಯ ಸೌಧಗಳು ಮಾಹಿತಿ ಕೇಂದ್ರವಾಗಿ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಕಾಯ್ದೆ, ಕಾನೂನುಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಕಾರ್ಯನಿರ್ವಹಿಸಲು ಅನುಕೂಲವಾಗಿದೆ ಎಂದರು. ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ಇವರು ವಿಶೇಷ ಉಪನ್ಯಾಸ ನೀಡುತ್ತ ಸಂವಿಧಾನದ ಆಶಯ, ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆ ಮತ್ತು ಡಾ: ಬಿಆರ್ ಅಂಬೇಡ್ಕರ್ ರವರ ಸಾಮಾಜಿಕ ಕಳಕಳಿ, ಪಂಚಾಯತ್ ರಾಜ್ ವ್ಯವಸ್ಥೆಯ ಇತಿಹಾಸ, ಮುಂದಿನ ಹಾದಿಯ ಬಗ್ಗೆ ತಿಳಿಸುತ್ತಾ ಯೋಜನೆ, ಅನುಷ್ಠಾನ, ಮೇಲ್ವಿಚಾರಣೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಕಡ್ಡಾಯವಾಗಿ ಪಾಲ್ಗೊಂಡು ಜನರ ಆಶೋತ್ತರಗಳನ್ನು ಈಡೇರಿಸಬೇಕೆಂದು ತಿಳಿಸಿದರು. ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಿ ಆರ್ ಪಾಟೀಲ್, ಕರ್ನಾಟಕ ಸರ್ಕಾರದ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ್ ಹೆಗಡೆ ,ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಸಿ ನಾರಾಯಣಸ್ವಾಮಿ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಉಪಾಧ್ಯಕ್ಷರಾದ ವಿ ವೈ ಘೋರ್ಪಡೆ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘ(ರಿ)ದ ರಾಜ್ಯಾಧ್ಯಕ್ಷರಾದ ತ್ರಿಭುವನೇಶ್ವರಿ ವಹಿಸಿದ್ದರು. ರಾಜ್ಯದ ವಿವಿಧ ತಾಲೂಕುಗಳಿಂದ ವಿಕೇಂದ್ರೀಕೃತ ತರಬೇತಿ ಸಂಯೋಜಕರುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
