ಉದಯವಾಹಿನಿ, ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಿಶ್ವಪ್ರಸಿದ್ಧ ಸ್ಮಿತ್ಸೋನಿಯನ್ ನ್ಯಾಷನಲ್ ಏರ್ ಆ್ಯಂಡ್‌ ಸ್ಪೇಸ್ ಮ್ಯೂಸಿಯಂ ಅತ್ಯಾಧುನಿಕ ವಿಮಾನಗಳು ಮತ್ತು ಬಾಹ್ಯಾಕಾಶ ನೌಕೆಗಳಿಗೆ ಹೆಸರುವಾಸಿ. ಆದರೆ ಇಂದು ಅಲ್ಲಿನ ಹೈಟೆಕ್ ಯಂತ್ರಗಳ ನಡುವೆ ಒಂದು ಸುಂದರವಾದ ಭಾರತೀಯ ಸೀರೆಯು ಪ್ರದರ್ಶನಕ್ಕಿಡಲಾಗಿದ್ದು, ಇದು ಜಗತ್ತಿನ ಗಮನ ಸೆಳೆಯುತ್ತಿದೆ. ಈ ಸೀರೆಯು ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ನಂದಿನಿ ಹರಿನಾಥ್ ಅವರದ್ದಾಗಿದ್ದು, ಇದು ಭಾರತದ ವೈಜ್ಞಾನಿಕ ಸಾಧನೆಯ ಸಂಕೇತವಾಗಿ ಅಲ್ಲಿ ರಾರಾಜಿಸುತ್ತಿದೆ.

ನಂದಿನಿ ಹರಿನಾಥ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಮತ್ತು ‘ರಾಕೆಟ್ ವುಮೆನ್ ಆಫ್ ಇಂಡಿಯಾ’ ಎಂದು ಕರೆಯಲ್ಪಡುವ ಪ್ರಮುಖರಲ್ಲಿ ಒಬ್ಬರು. ಗಣಿತ ಶಿಕ್ಷಕಿ ಮತ್ತು ಎಂಜಿನಿಯರ್ ದಂಪತಿಯ ಮಗಳಾಗಿ ಬೆಳೆದ ನಂದಿನಿ ಅವರಿಗೆ ಬಾಲ್ಯದಿಂದಲೇ ವಿಜ್ಞಾನದ ಬಗ್ಗೆ ಅಪಾರ ಕುತೂಹಲವಿತ್ತು. ಕಳೆದ 20 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಅವರು 14ಕ್ಕೂ ಹೆಚ್ಚು ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ. ಭಾರತದ ಮಹತ್ವಾಕಾಂಕ್ಷೆಯ ಮಂಗಳಯಾನ ಅಥವಾ ಮಾರ್ಸ್ ಆರ್ಬಿಟರ್ ಮಿಷನ್‌ನಲ್ಲಿ ಅವರು ಉಪ ಕಾರ್ಯಾಚರಣೆ ನಿರ್ದೇಶಕಿಯಾಗಿ ಅತ್ಯಂತ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದ್ದರು.
ಬಾಲ್ಯದಲ್ಲಿ ‘ಸ್ಟಾರ್ ಟ್ರೆಕ್’ ಟಿವಿ ಸರಣಿ ಮತ್ತು ‘ಅಪೋಲೋ 13’ನಂತಹ ಸಿನಿಮಾಗಳನ್ನು ನೋಡಿದ್ದರಿಂದ ನಂದಿನಿ ಅವರಿಗೆ ಬಾಹ್ಯಾಕಾಶ ಅನ್ವೇಷಣೆಯ ಬಗ್ಗೆ ಆಸಕ್ತಿ ಮೂಡಿತು. 2025ರ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ತಮ್ಮ ಇಡೀ ಕುಟುಂಬವು ಈ ವಿಜ್ಞಾನ ಆಧಾರಿತ ಕಥೆಗಳ ದೊಡ್ಡ ಅಭಿಮಾನಿಯಾಗಿತ್ತು ಮತ್ತು ಅದೇ ತಾವು ಈ ಮಟ್ಟಕ್ಕೆ ಬೆಳೆಯಲು ಪ್ರೇರಣೆ ಎಂದು ಹಂಚಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!