ಉದಯವಾಹಿನಿ, ಬೆಂಗಳೂರು: ಒಂದು ಕಡೆ ಮನೆ ಕೆಲಸದವ್ರೇ ಮಾಹಿತಿ ಲೀಕ್ ಮಾಡಿ ಮನೆ ಕಳ್ಳತನ ಮಾಡಿಸಿದ್ರೆ ಮತ್ತೊಂದು ಕಡೆ ರಾತ್ರಿಯಲ್ಲಿ ಬೆಂಗಳೂರಿಗೆ ಬಂದು ಕಳ್ಳತನ ಮಾಡಿ ಬೆಳಗ್ಗೆಯಾಗೋದ್ರಲ್ಲಿ ಮದ್ದೂರು ಸೇರ್ಕೊತಿದ್ದವನು ಅಂದರ್ ಆಗಿದ್ದಾನೆ. ಇತ್ತ ಜ್ಯೂಸ್ ಅಂಗಡಿಯಲ್ಲಿ ಹೈಡ್ರೋ ಗಾಂಜಾ ಮಾರ್ತಿದ್ದವರು ಅರೆಸ್ಟ್ ಆಗಿದ್ದಾರೆ. ಇತ್ತಿಚೆಗೆ ಬೆಂಗಳೂರಿನಲ್ಲಿ ಹೈಡ್ರೋಗಾಂಜಾ ಹಾವಳಿ ಮಿತಿಮೀರಿದ್ದು, ಪೊಲೀಸರು ಸಾಲು ಸಾಲು ಡ್ರಗ್ಸ್ ಕೇಸ್ ಗಳನ್ನ ಮಟ್ಟ ಹಾಕ್ತಿದ್ದಾರೆ. ಮಲ್ಲೇಶ್ವರಂ ಪೊಲೀಸರು ಕೇರಳ ಮೂಲದ ಮೊಹಮ್ಮದ್ ಅಫ್ರನ್, ಸಬೀತ್ ಮತ್ತು ಶ್ರೀನಾಥ್ ಎಂಬ ಮೂವರು ಪೆಡ್ಲರ್‌ಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿ, 464 ಗ್ರಾಂ ಹೈಡ್ರೋಗಾಂಜಾ ವಶಪಡಿಸಿಕೊಂಡಿದ್ದಾರೆ. ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದ ಆರೋಪಿಗಳು ಬೇಕಾದವ್ರಿಗೆ ಡ್ರಗ್ಸ್ ಪೂರೈಸ್ತಿದ್ರು.
ಇತ್ತ ಅಶೋಕನಗರ ಪೊಲೀಸರು ಭರ್ಜರಿ ಭೇಟೆಯಾಡಿದ್ದು, ಕೇರಳದಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ಮೊಹಮ್ಮದ್ ಹಮ್ಜಾ ಮತ್ತು ಯಾಸೀರ್ ಅಹಮದ್‌ನನ್ನ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 1 ಕೋಟಿ 5 ಲಕ್ಷ ರೂಪಾಯಿ ಮೌಲ್ಯದ 3 ಕೆಜಿ 222 ಗ್ರಾಂ ಹೈಡ್ರೋಗಾಂಜಾ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನೂ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ರಾಜಸ್ತಾನಿ ಗ್ಯಾಂಗ್ ಈಗ ಕೆ.ಆರ್ ಪುರಂ ಪೊಲೀಸರ ಅತಿಥಿಯಾಗಿದೆ. ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಗೋಪಾಲ್ ಮತ್ತು ನಾಗೇಂದ್ರ ಸಹಾನಿ, ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದರು. ಮನೆ ಕೆಲಸದವ್ರಿಂದ ಮನೆಯಲ್ಲಿ ಯಾರೂ ಇಲ್ಲ ಅನ್ನೋದನ್ನ ಕನ್ಫರ್ಮ್ ಮಾಡಿಕೊಂಡು ಕಳ್ಳತನಕ್ಕಿಳಿತಿದ್ರು. ಇವರಿಂದ 40 ಲಕ್ಷ ಮೌಲ್ಯದ 196 ಗ್ರಾಂ ಚಿನ್ನ ಹಾಗೂ 1 ಕೆಜಿಗೂ ಅಧಿಕ ಬೆಳ್ಳಿಯನ್ನ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದೆಡೆ ಮದ್ದೂರಿನಿಂದ ಪ್ರತಿ ಸಂಜೆ ಬೆಂಗಳೂರಿಗೆ ಬಂದು, ರಾತ್ರಿ ಮನೆಗಳ್ಳತನ ಮಾಡಿ ಬೆಳಗಾಗುವುದರೊಳಗೆ ಊರು ಸೇರುತ್ತಿದ್ದ ಮಹೇಶ್ ಗೌಡ @ ಆನಂದ್ ಎಂಬ ಖದೀಮನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಮೋಜು ಮಸ್ತಿಗಾಗಿ ಕಳ್ಳತನ ಮಾಡುತ್ತಿದ್ದ ಈತನಿಂದ 317 ಗ್ರಾಂ ಚಿನ್ನ ಹಾಗೂ 2.5 ಕೆಜಿ ಬೆಳ್ಳಿಯನ್ನು ಇನ್ಸ್‌ಪೆಕ್ಟರ್ ಪಾಪಣ್ಣ ತಂಡ ಜಪ್ತಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!