ಉದಯವಾಹಿನಿ ಚಿತ್ರದುರ್ಗ: ಜಿಲ್ಲೆಯಾದ್ಯಂತ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ ಐದು ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭೀಣಿಯರಿಗೆ ಬಿಟ್ಟುಹೋದ ಲಸಿಕೆಗಳನ್ನು ಪೂರ್ಣಗೊಳಿಸಲು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಆಯೋಜಿಸಿದೆ ಎಂದು ಆರ್‍ಸಿಹೆಚ್ ಅಧಿಕಾರಿ ಡಾ.ರೇಣುಪ್ರಸಾದ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ್-5.0 ಲಸಿಕಾ ಕಾರ್ಯಕ್ರಮದ ಜಿಲ್ಲಾಮಟ್ಟದ ಟಾಸ್ಕ್‍ಪೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಲಸಿಕಾ ಅಭಿಯಾನವು 3 ಸುತ್ತುಗಳಲ್ಲಿ ನಡೆಯಲಿದೆ. ಇದೇ ಆಗಸ್ಟ್ 7 ರಿಂದ 12 ರವರೆಗೆ, ಸೆಪ್ಟೆಂಬರ್ 11 ರಿಂದ 16 ರವರೆಗೆ ಮತ್ತು ಅಕ್ಟೋಬರ್ 9 ರಿಂದ 14 ರವರೆಗೆ  ನಡೆಯಲಿದ್ದು, ಪ್ರತಿ ತಿಂಗಳಲ್ಲಿ ಆರು ದಿನ ಲಸಿಕಾ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಈಗಾಗಲೇ ಹೆಡ್‍ಕೌಂಟ್ (ತಲೆ ಎಣಿಕೆ) ಸಮೀಕ್ಷೆಯ ಮೂಲಕ ಲಸಿಕೆಯಿಂದ ವಂಚಿತರಾದ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ತಯಾರಿಸಿ, ಕ್ರಿಯಾಯೋಜನೆ ರೂಪಿಸಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ಮೊಬೈಲೇಜೇಶನ್ ಆಗಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
ಇಂದ್ರಧನುಷ್ ಲಸಿಕಾ ಅಭಿಯಾನವನ್ನು ತೀವ್ರ ತರನಾಗಿ ಕೈಗೊಳ್ಳಲು ಜಿಲ್ಲೆಯಲ್ಲಿ ಈಗಾಗಲೇ ಸಿದ್ದತೆ ಕೈಗೊಳ್ಳಲಾಗಿದೆ. 900 ಗರ್ಭಿಣಿಯರು, 2 ವರ್ಷದ ಒಳಗಿನ 3418 ಮಕ್ಕಳು, 2 ರಿಂದ 5 ವರ್ಷ ಒಳಗಿನ 57 ಮಕ್ಕಳಿಗೆ ಲಸಿಕೆ ನೀಡಲಾಗುವುದು. ಸಂಚಾರಿ ಸೇರಿದಂತೆ 681 ಲಸಿಕಾಕರಣ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಮಕ್ಕಳ ತಜ್ಞರು ಹೆಚ್ಚಿನ ನಿಗಾ ವಹಿಸಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 398 ದಡರಾ ಹಾಗೂ ರುಬೆಲ್ಲಾ (ದದ್ದು ಹಾಗೂ ದಡಾರ) ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಿಗೆ ಸೂಕ್ತ ಚಿಕಿತ್ಸೆ ಸಹ ನೀಡಲಾಗುತ್ತಿದೆ ಎಂದರು.
ಡಬ್ಲ್ಯೂಹೆಚ್‍ಒ ಸಮಾಲೋಚಕ ಶ್ರೀಧರ್ ಮಾತನಾಡಿ,  ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ 12 ಮಾರಕ ರೋಗಗಳ ವಿರುದ್ಧ ಲಸಿಕೆ ನೀಡಲಾಗುತ್ತಿದೆ. ನಮ್ಮ ದೇಶ ಈಗಾಗಲೇ ಪೊಲೀಯೋ ಮುಕ್ತವಾಗಿದೆ. 2023ರ ಡಿಸೆಂಬರ್ ಅಂತ್ಯದೊಳಗೆ ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆ ಮಾಡುವ ಗುರಿ ಇದೆ. ಇಂದ್ರಧನುಷ್ 5.0 ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಬೇಕು ಎಂದರು.
 ಜಿಲ್ಲಾಮಟ್ಟದಲ್ಲಿ ಮಾತ್ರ ಸೀಮಿತವಾಗದೇ ಇನ್ನೂ ಮುಂದೆ ಪ್ರತಿ 15 ದಿನಕ್ಕೊಮ್ಮೆ ತಾಲ್ಲೂಕುಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಯಾವ ರೀತಿಯಲ್ಲಿ ದಡಾರ ಮತ್ತು ರುಬೆಲ್ಲಾ ರೋಗ ನಿರ್ಮೂಲನೆಗೆ ಕಾರ್ಯತತ್ಪರಾಗಬೇಕು ಎಂಬುವುದರ ಕುರಿತು ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲಾಮಟ್ಟಕ್ಕೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ  ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸಿ.ಒ.ಸುಧಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪಿ.ಲೋಕೇಶ್ವರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!