ಉದಯವಾಹಿನಿ, ಬೆಂಗಳೂರು: ಚಿನ್ನದ ದರ ಏರಿಕೆ ಖರೀದಿ ಮೇಲೆ ಭಾರೀ ಪರಿಣಾಮ ಬೀರಿದೆ. ಪ್ರಧಾನಿಗಳ ಸಲಹೆ ಮುನ್ನದಿಂದಲೂ ಖರೀದಿ ಮಾಡುವವರ ಸಂಖ್ಯೆ ಗಣನೀಯ ಇಳಿಕೆಯಾಗಿದ್ದು, ಚಿನ್ನದ ವ್ಯಾಪಾರಿಗಳು ವ್ಯಾಪಾರ ಇಲ್ಲ ಅನ್ನುವಂತಾಗಿದ್ದರೆ, ಚಿನ್ನದ ಕೆಲಸ ಮಾಡುವ ಅಕ್ಕಸಾಲಿಗರು (Goldsmith) ಕೆಲಸಕ್ಕಾಗಿ ಪರದಾಡುವಂತಾಗಿದೆ.
ಹೌದು, ಚಿನ್ನದ ದರ ಏರಿಕೆಯಾಗಿ ಖರೀದಿ ಮಾಡುವವರ ಸಂಖ್ಯೆ ಗಣನೀಯ ಇಳಿಕೆಯತ್ತ ಮುಖ ಮಾಡಿದೆ. ಅದರಲ್ಲೂ ಕಳೆದ ನಾಲ್ಕು ದಿನದ ಹಿಂದೆ ಪ್ರಧಾನಿಗಳ ಸಲಹೆ ಬಳಿಕ ಇದು ಇಡೀ ದೇಶ ವ್ಯಾಪಿ ದೊಡ್ಡ ಚರ್ಚೆ ಆಗುವುದರ ಜೊತೆಗೆ, ಇನ್ನಷ್ಟು ಏರಿಕೆ ಕೂಡ ಶುರುವಾಗಿದೆ. ಆದರೆ ಚಿನ್ನದ ಖರೀದಿ ಕಳೆದ ಕೆಲ ತಿಂಗಳ ಹಿಂದೆಯಿಂದಲೂ ಸತತವಾಗಿ ಇಳಿಕೆಯಾಗುತ್ತಿದೆ. ಪ್ರತಿ ವರ್ಷ ಅಕ್ಷಯ ತೃತೀಯ ಸಂದರ್ಭದಲ್ಲಿ ವರ್ಷವಿಡೀ ಆಗುವ ವ್ಯಾಪಾರ ಆ ಒಂದೇ ಸೀಸನ್‌ನಲ್ಲಿ ಆಗುತ್ತಿತ್ತು. ಆದರೆ ಈ ವರ್ಷ ಅಕ್ಷಯ ತೃತೀಯದಲ್ಲೇ ಸುಮಾರು 30% ನಷ್ಟು ಇಳಿಕೆಯಾಗಿದೆ. ಪ್ರತಿವರ್ಷ ಕನಿಷ್ಟ ಚಿನ್ನ ಖರೀದಿ ಮಾಡುತ್ತಿದ್ದವರು ಕೂಡ, ಈ ವರ್ಷ ಚಿನ್ನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಇದು ಕಳೆದ ಕೆಲ ತಿಂಗಳುಗಳಿಂದ ಸತತವಾಗಿ ಮುಂದುವರೆಯುತ್ತಿದ್ದು, ಒಟ್ಟಾರೆ ವ್ಯಾಪಾರ 50%ಗಿಂತಲೂ ಹೆಚ್ಚು ಕುಸಿತಕ್ಕೆ ಕಾರಣವಾಗಿದೆ ಎಂದು ಮಾಲೀಕರು ಹೇಳಿದ್ದಾರೆ.

ಇನ್ನೂ ಇದರ ಎಫೆಕ್ಟ್ ಕೇವಲ ಮಾಲೀಕರ ಮೇಲೆ ಮಾತ್ರ ಅಲ್ಲದೇ, ಚಿನ್ನ ಅಭರಣಗಳ ತಯಾರಿಕೆಯನ್ನೇ ದೈನಂದಿನ ಕಾಯಕವಾಗಿಸಿಕೊಂಡಿದ್ದ ಅಕ್ಕಸಾಲಿಗರಿಗೂ ತಟ್ಟಿದೆ. ಚಿನ್ನದ ಆಭರಣಗಳ ಖರೀದಿ ಕುಸಿತವಾದ ಹಿನ್ನೆಲೆ, ಆಭರಣಗಳ ತಯಾರಿ ಕೂಡ ಇಳಿಕೆಯಾಗಿದೆ. ಇದರಿಂದ ಅಕ್ಕಸಾಲಿಗರ ಕೆಲಸ ಕಡಿತವಾಗುತ್ತಿದ್ದು, ಪೂರ್ಣಪ್ರಮಾಣದಲ್ಲಿ ಕೆಲಸಗಳು ಸಿಗುತ್ತಿಲ್ಲ. ನಿತ್ಯ ಅಂಗಡಿಗಳಿಂದ ಅಂಗಡಿಗೆ ಕೆಲಸಕ್ಕಾಗಿ ಅಕ್ಕಸಾಲಿಗರು ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಇದನ್ನ ನಂಬಿರುವ ವರ್ಗ ಮುಂದಿನ ದಿನ ಸಂಕಷ್ಟಕ್ಕೆ ಸಿಲುಕುವ ಆತಂತಕ್ಕೆ ಒಳಗಾಗಿದೆ.

Leave a Reply

Your email address will not be published. Required fields are marked *

error: Content is protected !!