ಉದಯವಾಹಿನಿ, ಲಕ್ನೋ: ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯೊಂದಿಗೆ ಬೀಸಿದ ಪ್ರಬಲ ಚಂಡಮಾರುತ ವ್ಯಾಪಕ ಹಾನಿಯನ್ನುಂಟುಮಾಡಿದ್ದು, ಭದೋಹಿ, ಫತೇಪುರ್ ಮತ್ತು ಬುದೌನ್ ಸೇರಿದಂತೆ ಐದು ಜಿಲ್ಲೆಗಳಲ್ಲಿ 54 ಮಂದಿ ಸಾವನ್ನಪ್ಪಿದ್ದಾರೆ.ಪ್ರಯಾಗ್‍ರಾಜ್ ಪ್ರದೇಶದಲ್ಲೇ 16 ಮಂದಿ ಮಳೆಸಂಬಂಧಿ ಅನಾಹುತಗಳಿಂದ ಜೀವ ಕಳೆದುಕೊಂಡಿದ್ದಾರೆ. ಭದೋನಿ ಜಿಲ್ಲೆಯಲ್ಲಿ 16 ಮಂದಿ, ಫತೇಪುರ ಜಿಲ್ಲೆಯಲ್ಲಿ ಒಂಬತ್ತು, ಉನ್ನಾವೊದಲ್ಲಿ ನಾಲ್ಕು ಮಂದಿ, ಕಾನ್ಪುರ ದೇಹತ್‍ನಲ್ಲಿ ಮೂವರು, ಬುದೌನ್ ಜಿಲ್ಲೆಯಲ್ಲಿ ಐದು ಮಂದಿ, ಚಂದೌಲಿಯಲ್ಲಿ ಇಬ್ಬರು, ಸೋನಭದ್ರಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ ಮಾಹಿತಿಯಿಂದ ತಿಳಿದುಬಂದಿದೆ. ಅಕಾಲಿಕ ಗುಡುಗು ಸಹಿತ ಮಳೆ ಮತ್ತು ಸಿಡಿಲು ಬಡಿದು ಹಾನಿಗೊಳಗಾದ ಜನರಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳ ಒಳಗೆ ಪರಿಹಾರ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.
ಭದೋಹಿಯಲ್ಲಿ, ಹಲವಾರು ಪ್ರದೇಶಗಳಲ್ಲಿ ಮರಗಳು ಉರುಳಿದ್ದು, ವಿದ್ಯುತ್ ಕಂಬಗಳು ಮತ್ತು ಮನೆಗಳು ಹಾನಿಗೊಳಗಾಗಿರುವ ಬಗ್ಗೆ ವರದಿಯಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುನ್ವರ್ ವೀರೇಂದ್ರ ಕುಮಾರ್ ಮೌರ್ಯ ಮಾಹಿತಿ ನೀಡಿದರು.
