ಉದಯವಾಹಿನಿ, ದೇವಾಸ್‌ (ಮಧ್ಯಪ್ರದೇಶ): ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೇವಾಸ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಫೋಟದ ಮಾಹಿತಿ ಪಡೆದ ತಕ್ಷಣ, ಅಧಿಕಾರಿಗಳು ಮತ್ತು ಪರಿಹಾರ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಹತ್ತಿರದ ಗ್ರಾಮಸ್ಥರು ಸಹ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಹಾಯಕ್ಕೆ ನಿಂತರು. ದೇವಾಸ್ ಮತ್ತು ಉಜ್ಜಯಿನಿಯಿಂದ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತಲುಪಿದ್ದು, ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು.
“ದೇವಾಸ್ ಜಿಲ್ಲೆಯ ಟೋಂಕ್ ಖುರ್ದ್ ತಹಸಿಲ್‌ನ ಟೋಂಕಲಾ ಗ್ರಾಮದಲ್ಲಿರುವ ನಿರ್ಮಾಣ ಹಂತದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ದುರ್ಘಟನೆಯಲ್ಲಿ ಹಲವು ಸಾವು-ನೋವುಗಳು ಸಂಭವಿಸಿರುವ ಮಾಹಿತಿ ಇದೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ದೇವಾಸ್ ಕಲೆಕ್ಟರ್ ರಿತುರಾಜ್ ಸಿಂಗ್ ಮಾಹಿತಿ ನೀಡಿದ್ದಾರೆ. ಘಟನೆಯ ವೇಳೆ ಕಾರ್ಖಾನೆಯೊಳಗೆ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹಠಾತ್ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವು ಕಾರ್ಮಿಕರು ಕಾರ್ಖಾನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ, ಕೆಲವರಿಗೆ ಹೊರಬರುವ ಅವಕಾಶವೇ ಸಿಗದ ಹಿನ್ನೆಲೆ ಬೆಂಕಿಗೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಗಳ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿರುವ ಸಿಎಂ, ಘಟನೆಯ ತನಿಖೆಗೂ ಆದೇಶ ನೀಡಿದ್ದಾರೆ. ಈ ಬಗ್ಗೆ ಎಕ್ಸ್​ ಪೋಸ್ಟ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!