ಉದಯವಾಹಿನಿ ಚಿತ್ರದುರ್ಗ : ನಗರ ಸಮೀಪದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾರ್ವಜನಿಕರ ಮರಣ ಹಾಗೂ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಧಿತ ಪ್ರದೇಶದಲ್ಲಿ ಜನರ ಮನೆ ಮನೆಗೆ ಆಹಾರ ಸಾಮಗ್ರಿಗಳ ಫುಡ್ ಕಿಟ್ ಅನ್ನು ವಿತರಿಸಲಾಗುತ್ತಿದ್ದು, ಅಸ್ವಸ್ಥರ ಆರೋಗ್ಯ ಮೇಲ್ವಿಚಾರಣೆ ಹಾಗೂ ಸಲಹೆ ಸೂಚನೆಗಾಗಿ ರಾಜ್ಯ ಮಟ್ಟದಿಂದ ತ್ವರಿತ ಸ್ಪಂದನಾ ತಂಡ (ರ್ಯಾಪಿಡ್ ರೆಸ್ಪಾನ್ಸ್ ಟೀಮ್) ಆಗಮಿಸಿದ್ದು, ಪ್ರಕರಣ ಉಲ್ಬಣಗೊಳ್ಳದಂತೆ ಶೀಘ್ರ ಸಂಪೂರ್ಣ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ. ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಮರಣ ಹಾಗೂ ಅಸ್ವಸ್ಥಗೊಂಡ ಕವಾಡಿಗರ ಹಟ್ಟಿ ಪ್ರದೇಶದಲ್ಲಿ ಜಿಲ್ಲಾಡಳಿತದ ವತಿಯಿಂದ ಮನೆ ಮನೆಗೆ ಆಹಾರ ಸಾಮಗ್ರಿಗಳ ಫುಡ್ ಕಿಟ್‍ಗಳನ್ನು ಈಗಾಗಲೆ ವಿತರಿಸಲಾಗಿದ್ದು, ಊಟ, ತಿಂಡಿಯನ್ನು ಕೂಡ ಪೂರೈಕೆ ಮಾಡಲಾಗುತ್ತಿದೆ. ಉಪವಿಭಾಗಾಧಿಕಾರಿ ಕಾರ್ತಿಕ್ ಹಾಗೂ ತಹಸಿಲ್ದಾರ್ ನಾಗವೇಣಿ ಅವರು ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಫುಡ್ ಕಿಟ್ ವಿತರಣಾ ಕಾರ್ಯವನ್ನು ಸಮರ್ಪಕವಾಗಿ ಕೈಗೊಂಡಿದ್ದಾರೆ. ಅಸ್ವಸ್ಥರ ಆರೋಗ್ಯ ಮೇಲ್ವಿಚಾರಣೆ ಹಾಗೂ ನಿರ್ವಹಣೆಗಾಗಿ ಉನ್ನತ ಮಟ್ಟದ ವೈದ್ಯರ ತಂಡವನ್ನು ರಾಜ್ಯ ಮಟ್ಟದಿಂದ ಜಿಲ್ಲೆಗೆ ಕಳುಹಿಸಿಕೊಡುವಂತೆ ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಈಗಾಗಲೆ ಜಿಲ್ಲೆಗೆ ತಜ್ಞ ವೈದ್ಯರುಗಳನ್ನು ಒಳಗೊಂಡ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಜಿಲ್ಲೆಗೆ ಆಗಮಿಸಿದ್ದು, ಈಗಾಗಲೆ ತಂಡವು ಅಸ್ವಸ್ಥರ ಆರೋಗ್ಯ ಪರಿಸ್ಥಿತಿಯ ಮೇಲ್ವಿಚಾರಣೆ ಹಾಗೂ ಸಲಹೆ ಸೂಚನಾ ಕಾರ್ಯವನ್ನು ಪ್ರಾರಂಭಿಸಿದೆ. ಪ್ರಕರಣಗಳು ಉಲ್ಬಣಗೊಳ್ಳದಂತೆ ಪರಿಸ್ಥಿತಿಯನ್ನು ಶೀಘ್ರವಾಗಿ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಅಲ್ಲದೆ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ಕೂಡ ಸರ್ಕಾರದಿಂದ ಪಾವತಿಸಲು ಈಗಾಗಲೆ ಶಿಫಾರಸು ಸಲ್ಲಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
