ಉದಯವಾಹಿನಿ ಯಾದಗಿರಿ : ಜಿಲ್ಲೆಯಲ್ಲಿ ಯಾವುದೇ ಮಗು ಮತ್ತು ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಬಾರದು. ನಿಗದಿತ ಅವಧಿಯಲ್ಲಿ ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿ ಸಾರ್ವಜನಿಕರು ಇಂದ್ರಧನುಷ್ ಲಸಿಕಾ ಅಭಿಯಾನ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಕೋರಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರೋಗ್ಯ ಇಲಾಖೆಯ ಇಂದ್ರಧನುಷ್ ಲಸಿಕಾ ಅಭಿಯಾನದ ಕುರಿತು ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ನಡೆಸಿ ಹಾಗೂ ಅಭಿಯಾನದ ಜಾಗೃತಿಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಲಸಿಕೆ ವಂಚಿತರಿಗೆ ಲಸಿಕೆ ನೀಡುವ ಮಹಾ ಅಭಿಯಾನವು ತಾಯಿ ಮತ್ತು ಮಗುವಿನ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಮತ್ತು ರಕ್ಷಣೆ ನೀಡುವ ಸಲುವಾಗಿ ಸರ್ಕಾರವು ಈ ಅಭಿಯಾನ ನಡೆಸುತ್ತಿದೆ ಎಂದರು.ಇಂದ್ರಧನುಷ್ ಯೋಜನೆಯಡಿ ಐದು ವರ್ಷದೊಳಗಿನ ಮಕ್ಕಳಿಗೆ ಬರುವ ಏಳು ಕಾಯಿಲೆಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳು ಏಳು ಬಣ್ಣಗಳನ್ನು ಪ್ರತಿನಿಧಿಸುವುದರಿಂದ ಕಾಮನಬಿಲ್ಲನ್ನು ಇಂದ್ರಧನುಷ್ ಚಿಹ್ನೆಯಾಗಿ ಇಡಲಾಗಿದೆ.ಒಣ ಕೆಮ್ಮು, ದಡಾರ, ಪೋಲಿಯೋ, ಡಿಫ್ತೀರಿಯಾ, ಹೆಪಟೆಟಿಸ್ ಬಿ, ಧನುರ್ವಾಯು ಮತ್ತು ಕ್ಷಯ ರೋಗದಿಂದ ಮಕ್ಕಳನ್ನು ರಕ್ಷಿಸುವುದು ಅಭಿಯಾನದ ಉದ್ದೇಶವಾಗಿದೆ. ಕ್ಷಯ, ಡಿಫ್ತೀರಿಯಾ, ಪೆರ್ಟುಸಿಸ್, ಟೆಟನಸ್, ಪೋಲಿಯೋ, ನ್ಯುಮೋನಿಯಾ ಸೇರಿದಂತೆ ಇನ್ನಿತರ ಅಪಾಯಕಾರಿ ರೋಗಳ ವಿರುದ್ಧ ಲಸಿಕೆ ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
