
ಉದಯವಾಹಿನಿ, ರಾಮನಗರ: ಜಿಲ್ಲಾ ಮಟ್ಟದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಅಭಿಯಾನ 5.0 ಕಾರ್ಯಕ್ರಮಕ್ಕೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೇಳೆ ಮಾತನಾಡಿ ಮನುಷ್ಯನಿಗೆ ಪ್ರಮುಖವಾಗಿ ಬೇಕಿರುವುದು ಆರೋಗ್ಯ. ಆರೋಗ್ಯವೇ ಭಾಗ್ಯ. ಈಗ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಾಗಿದೆ. ಅದಕ್ಕೆ ಕಾರಣ ನಮ್ಮ ಆಹಾರ ಶೈಲಿ, ಪದ್ದತಿಯಾಗಿದೆ. ಇದನ್ನು ಮನಗಂಡ ಸರ್ಕಾರ ಹುಟ್ಟಿದ ಮಗವಿನಿಂದಲೇ ಸಾಂಕ್ರಾಮಿಕ ರೋಗಗಳು ಬಾರದಂತೆ ಎರಡು ವರ್ಷದ ಒಳಗಿನ 1628 ಮಕ್ಕಳು ಸೇರಿದಂತೆ 5 ವರ್ಷಗಳ ಒಳಗಿನ 79 ಮಕ್ಕಳಿಗೆ ಉಚಿತವಾಗಿ ಲಸಿಕೆ ಹಾಕುವ ಇಂದ್ರಧನುಷ್ ಕಾರ್ಯಕ್ರಮದ ಮೂಲಕ ಸಾಕಾರವಾಗಬೇಕಿದೆ. ಈ ಪರಿಣಾಮ ಕಾರಿ ಆರೋಗ್ಯ ಕಾರ್ಯಕ್ರಮದಲ್ಲಿ ವೈದ್ಯರು, ಅಂಗನವಾಡಿ, ಆಶಾ, ಆರೋಗ್ಯ ನಿರೀಕ್ಷಕರ ಜೊತೆ ಕೈಗೂಡಿಸಿ ಎಂದು ಮನವಿ ಮಾಡಿದರು.ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ತಪಾಸಣೆಗೆ ಆಗಮಿಸಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಎದುರಾಗದಂತೆ ಕ್ರಮವಹಿಸಲಾಗುವುದು. ಈ ಬಗ್ಗೆ ನಾನು ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿರುವುದಾಗಿ ಹೇಳಿದರು. ಜಿಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ, ಉಒಕೇಂದ್ರಗಳು, ಅಂಗನವಾಡಿಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ನೆರೆದಿದ್ದವರಲ್ಲಿ ಮನವಿ ಮಾಡಿದರು. ಡಿಎಚ್ ಓ ಕಾಂತರಾಜು ಮಾತನಾಡಿ ಕಳೆದ ಒಂದು ತಿಂಗಳಿಂದ ಮನೆಮನೆ ಸರ್ವೆ ಮಾಡಿ ಲಸಿಕೆಯಿಂದ ವಙಚಿತರಾದವರನ್ನು ಗುರ್ತಿಸಿ ಜಿಲ್ಲೆಯಾಧ್ಯಂತ 515 ಕೇಂದ್ರಗಳಲ್ಲಿ ಮೂರು ಸುತ್ತಿನಲ್ಲಿ ಮಕ್ಕಳಿಗೆ ಲಸಿಕೆ ಹಾಕ ಲಾಗುವುದು ಎಂದರು.ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಪದ್ಮಾ ಮಾತನಾಡಿ ಲಸಿಕೆ ಹಾಕಿಸಲು ಜನರಲ್ಲಿ ಎದರಿಕೆ ಮನೋಭಾವವಿದೆ. ಸರ್ಕಾರದಿಂದ ಬಂದಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಅಕ್ಕಪಕ್ಕದ ಮನೆಯ ಮಕ್ಕಳಿಗೆ ಲಸಿಕೆ ಹಾಕಿಸುವ ಬಗ್ಗೆಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಪ್ರಭಾರ ಅದ್ಯಕ್ಷೆ ಸೋಮಶೇಖರ್, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಶಶಿಕಲಾ, ಡಿಎಲ್ ಓ ಡಾ.ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಅಧಿಕಾರಿ ವಿನಯ್ ಕುಮಾರ್ ಇದ್ದರು.
