
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ಜಾಲವಾದ ಗ್ರಾಮದ ಅಂಗನವಾಡಿ ಕೇಂದ್ರ-4ರಲ್ಲಿ ಗುರುವಾರದಂದು ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು.
ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾದ ಬಿ ಆರ್ ಮಣುರ ಮಾತನಾಡಿ,ಮಗುವಿನ ಬೆಳವಣಿಗೆಗೆ ಎದೆಹಾಲು ಶ್ರೇಷ್ಠವಾಗಿದ್ದು, ರೋಗ ನಿರೋಧಕ ಶಕ್ತಿಹೊಂದಿದೆ ತಾಯಿ ಹಾಲು ಸೇವನೆಯಿಂದ ಮಗುವಿನಲ್ಲಿ ಮಾರಕ ಕಾಯಿಲೆಗಳ ನಿಯಂತ್ರಣವಾಗುತ್ತದೆ.ಶಿಶುಗಳಿಗೆ ಕನಿಷ್ಠ 6ತಿಂಗಳು ತಾಯಿ ಎದೆ ಹಾಲು ಕುಡಿಸುವುದು ಅಗತ್ಯ. 1 ವರ್ಷದ ನಂತರ ಎರಡು ವರ್ಷದವರೆಗೆ ಎದೆ ಹಾಲಿನ ಜತೆಗೆ ನೈಸರ್ಗಿಕ ಆಹಾರವನ್ನು ಕೊಡುವುದು ಉತ್ತಮ ಎಂದು ತಿಳಿಸಿದರು.
ಕೆಲವು ತಾಯಂದಿರು ತಿಳಿವಳಿಕೆ ಕೊರತೆಯಿಂದ ಮಗುವಿಗೆ ಎದೆ ಹಾಲು ಕೊಡುವುದನ್ನು ನಿಲ್ಲಿಸುತ್ತಾರೆ. ಮಕ್ಕಳಿಗೆ ತಾಯಿ ಎದೆಹಾಲಿಗಿಂತ ಶ್ರೇಷ್ಠ ಆಹಾರ ಇನ್ನೊಂದಿಲ್ಲ. ಮಗುವಿಗೆ ಹಾಲು ಕೊಡುವುದರಿಂದ ತಾಯಿಯ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ ಎಂದು ಹಾಗೂ ಪೌಷ್ಟಿಕ ಆಹಾರದ ಕುರಿತು ಮಾಹಿತಿ ಹೇಳಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮೀನಾಕ್ಷಿ ಉಕ್ಕಲಿ, ಆರ್ ಬಿ ಕೊಟಗಿ ಸೇರಿದಂತೆ ಗ್ರಾಮದ ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.
