
ಉದಯವಾಹಿನಿ ಕುಶಾಲನಗರ : ವಿದ್ಯಾರ್ಥಿಗಳು ಉತ್ತಮ ಬದುಕು ಹಾಗೂ ಭವಿಷ್ಯ ರೂಪಿಸಿಕೊಳ್ಳಲು ನಾವು ಇಂದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದಕ್ಕೆ ಪೂರಕವಾಗಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಾಮಂಥರ್ ಗೌಡ ಕರೆ ನೀಡಿದರು. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ( ಆಗಸ್ಟ್ 8 ರಂದು ) ರೂ.15.06 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಹೆಚ್ಚಿನ ಒತ್ತಡ ನೀಡದೇ ಅವರನ್ನು ಪ್ರೀತಿಯಿಂದ ಸ್ನೇಹಿತರಂತೆ ಕಾಣುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಶಾಲೆಯ ವತಿಯಿಂದ ಸಲ್ಲಿಸಲಾದ ಮನವಿಗೆ ಸ್ಪಂದಿಸಿದ ಶಾಸಕ ಡಾ ಮಂಥರಗೌಡ ಅವರು, ಹಂತ ಹಂತವಾಗಿ ಶಾಲಾ ಮೂಲಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಶಾಲೆಗಳ ಅಗತ್ಯತೆಗೆ ಅನುಗುಣವಾಗಿ ಶಾಲಾ ಕೊಠಡಿ ಮತ್ತು ಇನ್ನಿತರ ಕಟ್ಟಡಗಳನ್ನು ನಿರ್ಮಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಇಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಗಳು ಉತ್ತಮ ಯೋಜನೆ ಮತ್ತು ನೀಲನಕ್ಷೆ ರೂಪಿಸಲು ಆದ್ಯತೆ ನೀಡಬೇಕು ಎಂದು ಡಾ ಮಂಥರ್ ಗೌಡ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಈ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳು ಉತ್ತಮವಾಗಿವೆ ಎಂದರು. ಶಾಲಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಶಾಲೆಯ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್, ಪ್ರವಾಸೋದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್, ಪ್ರಭಾರ ಡಿಡಿಪಿಐ ಸೌಮ್ಯ ಪೊನ್ನಪ್ಪ, ವಿಷಯ ಪರಿವೀಕ್ಷಕಿ ಬಿಂದು, ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀರೇಂದ್ರ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಕೆ.ಬಿ. ಈರಪ್ಪ, ಸದಸ್ಯರಾದ ಜವರಯ್ಯ, ಎಂ. ನಾಗರಾಜು, ಗ್ರಾಮ ಸಮಿತಿಯ ಪ್ರಮುಖರಾದ ಗೋವಿಂದೇಗೌಡ, ಕೆ.ಎಸ್.ರಾಜಾಚಾರಿ, ಕೆ.ಎನ್.ಪವನ್ ಕುಮಾರ್ , ವೈ.ಟಿ.ಪರಮೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜ್, ಶಿಕ್ಷಕರು, ವಿವಿಧ ಸಂಘಟನೆಗಳ ಪ್ರಮುಖರು, ಪೋಷಕರು ಇದ್ದರು. ಶಿಕ್ಷಕಿ ಬಿ.ಡಿ.ರಮ್ಯ ನಿರ್ವಹಿಸಿದರು. ಶಿಕ್ಷಕ ದಯಾನಂದ ಪ್ರಕಾಶ್ ಸನ್ಮಾನಿತರ ಪರಿಚಯ ಮಾಡಿದರು.
ಇದೇ ವೇಳೆಯಲ್ಲಿ ಶಾಸಕ ಡಾ ಮಂಥರ್ ಗೌಡ, ಶಾಲೆಯ ಆರಂಭದಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಕೆ.ಕೆ.ಮಂಜುನಾಥ್ ಕುಮಾರ್ ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ ಅವರನ್ನು ಎಸ್ ಡಿ ಎಂ ಸಿ ವತಿಯಿಂದ ಗೌರವಿಸಲಾಯಿತು. ಇದೇ ವೇಳೆ ಜಿಲ್ಲಾ ಹಾಗೂ ರಾಜ್ಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಾದ ರಾಜೇಶ್ ಹಾಗೂ ಪ್ರಜ್ವಲ್ ಅವರಿಗೆ ಶಾಸಕ ಡಾ ಮಂಥರ್ ಗೌಡ ಪ್ರಶಸ್ತಿ ಪತ್ರ ವಿತರಿಸಿದರು. ಹಾಗೆಯೇ, ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಅಭಿಯಾನದಡಿ ಬಟ್ಟೆ ಕೈ ಚೀಲಗಳನ್ನು ಶಾಸಕ ಡಾ ಮಂಥರ್ ಗೌಡ ಬಿಡುಗಡೆಗೊಳಿಸಿದರು.
