
ಉದಯವಾಹಿನಿ ಯಾದಗಿರಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಇತಿಹಾಸವೇ ಅತ್ಯಂತ ರೋಚಕ ಮತ್ತು ಪ್ರೇರಣದಾಯಕವಾಗಿದ್ದು, ಜಿಲ್ಲಾಡಳಿತವು ಸದಾ ಸ್ವಾತಂತ್ರ್ಯ ಹೋರಾಟಗಾರರ ಹಿತಕಾಯುವಲ್ಲಿ ಬದ್ದವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ.ಅವರು ಅಭಿಪ್ರಾಯಪಟ್ಟರು.ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ಅಂಗವಾಗಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಾದ ಸಂಗಪ್ಪ ತಂದೆ ಬಸಪ್ಪ ಮಂಟೆ ಅವರಿಗೆ ಅವರ ಸ್ವಗೃಹದಲ್ಲಿಯೇ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿ ಅವರ ದಾಸ್ಯದಿಂದ ಮುಕ್ತ ಮಾಡಿದ ಸ್ವಾತಂತ್ರ್ಯ ಸೇನಾನಿಗಳ ಆದರ್ಶ ವಿಚಾರಗಳನ್ನು ಇಂದಿನ ಯುವ ಪೀಳಿಗೆಯು ಮಾದರಿಯಾಗಿ ಸ್ವೀಕರಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ನುಡಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಸಂಗಪ್ಪ ಅವರ ಯೋಗಕ್ಷೇಮವನ್ನು ವಿಚಾರಿಸಿದ ಜಿಲ್ಲಾಧಿಕಾರಿಯವರು ಅವರಿಂದ ಸ್ವಾತಂತ್ರ್ಯ ಸಂಗ್ರಾಮದ ಸನ್ನಿವೇಶ, ಯೋಧರ ತ್ಯಾಗ ಬಲಿದಾನ ಇನ್ನಿತರ ವಿಷಯಗಳ ಕುರಿತು ಕುತೂಹಲದಿಂದ ಆಲಿಸಿದರು.ಈ ಸಂದರ್ಭದಲ್ಲಿ ಹುಣಸಗಿ ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಹಾಗೂ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.
