ಉದಯವಾಹಿನಿ ಅಫಜಲಪುರ: ಆಧುನಿಕತೆ ಬೆಳೆದಂತೆ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಂಡು ಬರುತ್ತಿದೆ. ಇದು ನಿಜಕ್ಕೂ ಕಳವಳಕಾರಿ ಅಂಶವಾಗಿದ್ದು ಇದೇ ಮುಂದುವರೆದರೆ ಭವಿಷ್ಯತ್ತಿನಲ್ಲಿ ತಂದೆ, ತಾಯಿ, ಗುರು ಯಾವುದೇ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಲಿದೆ ಹೀಗಾಗಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವುದು ಅಗತ್ಯವಾಗಿದೆ ಎಂದು ಡಾ. ಅಭಿನವ ಚನ್ನಮಲ್ಲ ಶಿವಯೋಗಿಗಳು  ಹೇಳಿದರು. ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ-ಪಿತೃ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಳೆಯುವ ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ, ಒಳ್ಳೆಯ  ಪುಸ್ತಕಗಳನ್ನು ನೀಡಿ, ಮಕ್ಕಳು ಏನೇನು ಓದುತ್ತಾರೆ, ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆನ್ನುವುದನ್ನು ಪಾಲಕರು ನೋಡಿ, ಶಿಕ್ಷಕರು ನೋಡಿ. ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ ಹೇಗಿವೆ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದಾಗುವ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಮಕ್ಕಳ ಎದುರು ತಂದೆ ತಾಯಿಯಾದವರು ಜಗಳವಾಡುವುದು, ದುಶ್ಚಟಗಳನ್ನು ಮಾಡುವುದು ಬಿಟ್ಟು ಬಿಡಿ ಏಕೆಂದರೆ ದೊಡ್ಡವರನ್ನು ನೋಡಿ ಅನುಕರಿಸುವ ಮಕ್ಕಳು ನಾಳೆ ಅದೇ ದುಶ್ಚಟಗಳಿಗೆ ದಾಸರಾದರೆ ಅಚ್ಚರಿ ಪಡಬೇಕಾಗಿಲ್ಲ ಎಂದ ಅವರು ನಮ್ಮ ಮಠದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ನಮ್ಮ ಶಿಕ್ಷಕ ವೃಂದದವರು ಹೇಳಿಕೊಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು. ಬಳಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯರ ಪಾದಪೂಜೆ ಮಾಡಿ ನಮಸ್ಕರಿಸಿ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಚಿಂಚೋಳಿ ಮಠದ ಗದ್ದುಗೇಶ್ವರ  ಮಲ್ಲಿಕಾರ್ಜುನ ಶಿವಾಚಾರ್ಯರು, ಸಿಆರ್‌ಸಿ ಕಲ್ಯಾಣಿ ಮೇತ್ರೆ, ಮುಖಂಡರಾದ ಶ್ರೀಕಾಂತ ನಿಂಬಾಳ, ಗೋರಖನಾಥ ಮಳಗಿ, ರೇವಣಸಿದ್ದ ಖೈರಾಟ್, ರಾಜು ಸಾಣಾಕ್, ಕಲ್ಲಪ್ಪ ಚಾಂಬಾರ, ಯಲ್ಲಪ್ಪ ಡಬ್ಬಿ, ಸೂರ್ಯಕಾಂತ ಮಾಡ್ಯಾಳ, ಸಂಸ್ಥೆಯ ಮುಖ್ಯಗುರುಗಳಾದ ಉಮಾಕಾಂತ ರಾಠೋಡ, ಎಂ.ಆರ್ ಕಲಶೆಟ್ಟಿ, ಚಾಂದ್ ನದಾಫ್ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!