
ಉದಯವಾಹಿನಿ ಸುರಪುರ : ತಾಲ್ಲೂಕಿನ ಚಿಕ್ಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರಿಂದ ತಿಪನಟಗಿ ಗ್ರಾಮದ ಕೆಇಬಿ ಮುಂದೆ ಬೆಳ್ಳಂಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪ್ರತಿಭಟನೆ ಉದ್ದೇಶಿಸಿ ಉದಯವಾಹಿನಿ ಪತ್ರಿಕೆ ಯೊಂದಿಗೆ ಮಾತನಾಡಿದ ರೈತರು ಕಳೆದ 15 ದಿನಗಳಿಂದ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ, ಲೈನ್ ಮ್ಯಾನ್ ಮತ್ತು ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾದ ಸ್ಪಂದನೆ ಇಲ್ಲ,ಈ ಬಾರಿ ಮಳೆ ಹಿನ್ನಡೆಯಾದ ಕಾರಣದಿಂದಾಗಿ ನಾರಾಯಣಪುರ ಎಡದಂಡೆ ಕಾಲುವೆ ನೀರು ಇಲ್ಲದಿರುವುದರಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ.ಸಧ್ಯ ಕಾಲುವೆ ಹಾಗೂ ಹಳ್ಳಕ್ಕೆ ನೀರು ಹರಿದು ಬರುತ್ತಿದ್ದು ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಸಧ್ಯ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದ್ದು ಅಧಿಕಾರಿಗಳು ಸರಿಯಾಗಿ ವಿದ್ಯುತ್ ನೀಡದೇ ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು .ಪರಿಸ್ಥಿತಿ ಸರಿದೂಗಿಸದೇ ಇದ್ದಲ್ಲಿ ತಾಲ್ಲೂಕಿನ ಎಲ್ಲ ಗ್ರಾಮಗಳ ರೈತರು ಸೇರಿ ಸುರಪುರ ನಗರದಲ್ಲಿರುವ ಕೆಇಬಿ ಕಛೇರಿಗೆ ಬೀಗ ಜಡಿದು ಮುಳ್ಳು ಕಂಟಿ ಹಚ್ಚಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
