ಉದಯವಾಹಿನಿ, ನವದೆಹಲಿ: ಮಣಿಪುರ ಹಿಂಸಾಚಾರ ಪ್ರಕರಣ ಸಂಸತ್ತಿನ ಮುಂಗಾರು ಅಧಿವೇಶನವನ್ನು ಸಂಪೂರ್ಣ ಬಲಿ ತೆಗೆದುಕೊಂಡಿದೆ. ಅಧಿವೇಶನ ಆರಂಭವಾದಾಗಿನಿಂದ ಧರಣಿ, ಗದ್ದಲ, ಗಲಾಟೆ, ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎನ್ನುವ ಹೋರಾಟವೇ ಪ್ರಧಾನವಾಗಿತ್ತು.
ಜುಲೈ ೨೦ ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಇಂದು ಅಂತ್ಯಗೊಳ್ಳುವ ತನಕ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ “ ನೀ ಕೊಡೆ ನಾ ಬಿಡೆ” ಎನ್ನುವಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಜಗ್ಗ ಜಗ್ಗಾಟ ನಡೆದು ಕಲಾಪ ಅನಿರ್ಧಿಷ್ಟಾವಧಿಗೆ ಸಂಜೆ ಮುಂದೂಡುವ ಹಂತಕ್ಕೆ ಬಂದಿದೆ. ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಸದಸ್ಯರು ಮಣಿಪುರ ವಿಷಯವನ್ನು ಮುಂದಿಟ್ಟುಕೊಂಡು ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ ಗಲಾಟೆ ನಡೆಸಿದರೂ ಯಾವುದಕ್ಕೂ ಸೊಪ್ಪು ಹಾಕದೆ ಆಡಳಿತ ಪಕ್ಷ ತಮಗೆ ಇಷ್ಟ ಬಂದಂತೆ ಹಾಗು ತಾನು ಅಂದುಕೊಂಡಂತೆ ಕಲಾಪ ನಡೆಸಿದೆ. ಈ ನಡುವೆ ವಿರೋಧ ಪಕ್ಷಗಳ ಮೈತ್ರಿಕೂಟದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಸದಸ್ಯರು ಮತ್ತೆ ನಾವೇ ಅಧಿಕಾರಕ್ಕೆ ಬರುವುದು ಎಂದು ಬೀಗುತ್ತಿದ್ದಾರೆ.
