ಉದಯ ವಾಹಿನಿ ಪಾವಗಡ: ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ‘ಮೇರಿ ಮಾಟಿ, ಮೇರಿ ದೇಶ್’ (ನನ್ನ ಮಣ್ಣು, ನನ್ನ ದೇಶ) ಎಂಬ ಅಭಿಯಾನದ ಮೂಲಕ ಸಸಿಗಳನ್ನು ನೆಟ್ಟು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡಿದ ವೀರ ಯೋಧರ ಶಿಲಾಫಲಕಗಳನ್ನು ನಿರ್ಮಿಸಿ ಗೌರವ ಸಲ್ಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಶಾಸಕ ಹೆಚ್.ವಿ.ವೆಂಕಟೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ಮೇರಿ ಮಾಟಿ, ಮೇರಿ ದೇಶ್’ (ನನ್ನ ಮಣ್ಣು, ನನ್ನ ದೇಶ) ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ತವೆನಿಸಿದ 75 ಗಿಡ ನೆಟ್ಟು ಅಮೃತ ವಾಟಿಕಾ ನಿರ್ಮಿಸಬೇಕು. ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಂಡು ಪಂಚ ಪ್ರಮಾಣ ವಚನ ಸ್ವೀಕರಿಸಿ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು. ತಹಶೀಲ್ದಾರ್ ಡಿ.ಎನ್.ವರದರಾಜು ಮಾತನಾಡಿ, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಮಣ್ಣನ್ನು ಸಂಗ್ರಹಿಸಿದ ಮಣ್ಣಿನ ಕಳಶಗಳನ್ನು ನವದೆಹಲಿಯ ಕರ್ತವ್ಯ ಪಥಕ್ಕೆ ಸಾಗಿಸಿ ‘ಅಮೃತ್ ವಾಟಿಕಾ’ ಎಂಬ ವಿಶಿಷ್ಟವಾದ ಉದ್ಯಾನವನ್ನು ಅಭಿವೃದ್ಧಿಪಡಿಸಲು ಬಳಸಲಾಗುವುದು ಎಂದು ಹೇಳಿದರು.
ಈ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವಲಿಂಗಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಪಂಚಪ್ರಾಣ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಮಾಜಿ ಪುರಸಭೆ ಅಧ್ಯಕ್ಷ ಎ.ಶಂಕರ್ ರೆಡ್ಡಿ, ಪುರಸಭೆ ಸದಸ್ಯರಾದ ಪಿ.ಹೆಚ್.ರಾಜೇಶ್, ರವಿ, ಬಾಲ ಸುಬ್ರಮಣ್ಯ, ಗೊರ್ತಿ ನಾಗರಾಜು, ಮುಖಂಡರಾದ ಬತ್ತಿನೇನಿ ನಾಗೇಂದ್ರ ರಾವ್ (ನಾನಿ), ಗುಟ್ಟಹಳ್ಳಿ ಅಂಜಿನಪ್ಪ, ಮೈಲಪ್ಪ, ರಿಜ್ವಾನ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಶಂಷುದ್ದೀನ್, ಕಸಬಾ ಕಂದಾಯ ನೀರಿಕ್ಷಕ ರಾಜ್ ಗೋಪಾಲ್, ಪ್ರಾಂಶುಪಾಲ ಧನಂಜಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!