
ಉದಯವಾಹಿನಿ,ಶಿಡ್ಲಘಟ್ಟ :ತಾಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಸರಸ್ವತಿ.ಡಿ.ಎಂ ಹಾಗು ಉಪಾಧ್ಯಕ್ಷರಾಗಿ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಮೃತ.ಎನ್. ಆಯ್ಕೆಯಾಗಿದ್ದಾರೆ.ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೬ ಸದಸ್ಯ ಬಲ ಹೊಂದಿರುವ ಚೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷಸ್ಥಾನ ಎಸ್‌ಸಿ ಮಹಿಳೆ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಪಡಿಸಲಾಗಿದ್ದು ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಸರಸ್ವತಿ.ಡಿ.ಎಂ ಮತ್ತು ಜೆಡಿಎಸ್ ಬೆಂಬಲಿತ ಇಂದ್ರಮ್ಮ.ವಿ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಮೃತ.ಎನ್. ಮತ್ತು ಜೆಡಿಎಸ್ ಬೆಂಬಲಿತ ಶಾರದ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನದ ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಸರಸ್ವತಿ.ಡಿ.ಎಂ ೦೯ ಮತಗಳನ್ನು ಪಡೆದರೆ, ಜೆಡಿಎಸ್ ಬೆಂಬಲಿತ ಇಂದ್ರಮ್ಮ.ವಿ ೦೭ ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಕಾಂಗ್ರೆಸ್ ಬೆಂಬಲಿತ ಅಮೃತ.ಎನ್ ೦೯ ಮತಗಳನ್ನು ಪಡೆದರೆ, ಜೆಡಿಎಸ್ ಬೆಂಬಲಿತ ಶಾರದ ೦೭ ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸಂತೋಷ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ ರಾಜಣ್ಣ,ಸುರೇಂದ್ರಗೌಡ,ಆನಂದಗೌಡ, ಮಾಜಿ ಅಧ್ಯಕ್ಷ ನಾಗರಾಜ್, ರಾಜಪ್ಪ, ಮಾಜಿ ಉಪಾಧ್ಯಕ್ಷ ಸುಮಿತ್ರ ಮಂಜುನಾಥ್, ಸದಸ್ಯರಾದ ಶ್ರೀನಿವಾಸ್, ಅಯ್ಯಣ್ಣ, ಪಿಡಿಓ ತನ್ವೀರ್‌ಅಹಮ್ಮದ್ ಮತ್ತಿತರರು ಹಾಜರಿದ್ದರು.
