
ಉದಯವಾಹಿನಿ ದೇವರಹಿಪ್ಪರಗಿ: ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಶನಿವಾರದಂದು ‘ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡಿರುವ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಪಟ್ಟಣದಿಂದ ಮುಳಸಾವಳಗಿ, ಇಬ್ರಾಹಿಂಪುರ, ಹರನಾಳ ,ಮಣೂರ, ಜಾಲವಾದ, ಚಟ್ಟರಕಿ,ತಾಂಬಾ ಹಾಗೂ ಇಂಡಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗಾಗಿ ಪಟ್ಟಣಕ್ಕೆ ಬರುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ ಸಿಗುತ್ತಿಲ್ಲ. ಈಗೀಗ ಕೆಲವು ಬಸ್‌ಗಳಿಗೆ ವಿದ್ಯಾರ್ಥಿ ಪಾಸ್‌ಗೆ ಅನುಮತಿ ಇಲ್ಲವೆಂದು ಫಲಕ ಹಾಕಿದ್ದಾರೆ’ ಎಂದು ದೂರಿ ವಿದ್ಯಾರ್ಥಿಗಳು ನಿಲ್ದಾಣದ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.‘ಬೆಳಗಿನ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು.ಹಾಗೂ ಮಧ್ಯಾಹ್ನ ಊರಿಗೆ ಹೋಗಲು ತೀವ್ರ ತೊಂದರೆ ಆಗುತ್ತಿದೆ ಕಾಲೇಜುಗಳು ಮಧ್ಯಾಹ್ನ 12.30 ಗಂಟೆಗೆ ಬಿಟ್ಟರೆ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 3:30 ಗಂಟೆಯವರೆಗೆ ಕಾದಿದ್ದೇವೆ ಇನ್ನು ಬಸ್ ಬಂದಿಲ್ಲ ಇಬ್ರಾಹಿಂಪುರ ಹಾಗೂ ಮುಳಸಾವಳಗಿ ಮಾರ್ಗವಾಗಿ ಹೋಗುವ ವಿದ್ಯಾರ್ಥಿಗಳಿಗೆ ಇದು ದಿನನಿತ್ಯದ ಸಮಸ್ಯೆಯಾಗಿದೆ. ನೂತನ ಬಸ್ ನಿಲ್ದಾಣ ಆಗುತ್ತಿರುವುದರಿಂದ ಬಿಸಿಲು ಹಾಗೂ ಮಳೆಯ ನಡುವೆ ಕುಳಿತುಕೊಳ್ಳಲು ಸ್ಥಾನ ಇಲ್ಲದೆ ಹಾಗೂ ಹೊಟ್ಟೆಯ ಹಸಿವು ತಡೆದು ಬಸ್ಸುಗಳಿಗಾಗಿ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಲೇಜು ವಿದ್ಯಾರ್ಥಿಗಳು ಅಲವತ್ತುಕೊಂಡರು. ನಂತರ ಪೊಲೀಸ್ ಅಧಿಕಾರಿಗಳು ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸಲು ಅನುವು ಮಾಡಿಕೊಟ್ಟರು.
‘ಬಸ್‍ಗಳು ನಿಲ್ದಾಣದ ಹೊರಗೆ ನಿಂತರೆ ಬಹುತೇಕ ಬಸ್‍ಗಳನ್ನು ಹೆದ್ದಾರಿಯ ಮೇಲೆ ನಿಲುಗಡೆ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿನಿಯರು ಬಸ್ ತಪ್ಪಿಸಿಕೊಳ್ಳತ್ತಾರೆ. ಬಸ್‍ಗಳನ್ನು ಕಡ್ಡಾಯವಾಗಿ ನಿಲ್ದಾಣದಲ್ಲಿ ನಿಲ್ಲುವಂತೆ ಮಾಡಬೇಕು ಎನ್ನುವುದು ವಿದ್ಯಾರ್ಥಿಗಳ ಆಶಯವಾಗಿದೆ.ಬಸ್ ನಿಲ್ದಾಣದಲ್ಲಿ ಸಮಸ್ಯೆ ಹೇಳಿಕೊಳ್ಳಲು ಕಂಟ್ರೋಲರ್ ಇರುವುದಿಲ್ಲ, ಅಧಿಕಾರಿಗಳು ಕೂಡಲೇ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು ಇಲ್ಲದಿದ್ದರೆ ಬರುವಂತ ದಿನಗಳಲ್ಲಿ ವಿದ್ಯಾರ್ಥಿಗಳ ಸಂಘದಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಹೇಳಿದರು.
ದಿನನಿತ್ಯ ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಬೆಳಗ್ಗೆ 6:30 ಗಂಟೆಗೆ ಮನೆಯಿಂದ ಕಾಲೇಜಿಗೆ ಬರುತ್ತೇವೆ ಮಧ್ಯಾಹ್ನ 12:30 ಗಂಟೆಗೆ ಕಾಲೇಜು ಬಿಡುತ್ತದೆ 1:00 ಗಂಟೆಗೆ ಬರುವ ಬಸ್ಸು 3:00 ಆದರೂ ಬಂದಿಲ್ಲ. ಬಿಸಿಲಲ್ಲಿ ಹಸಿವಿನಿಂದ ಬಸ್ ಗಾಗಿ ಕಾಯುವ ಪರಿಸ್ಥಿತಿ ಬಂದಿದೆ ಬಸ್ ನಿಲ್ದಾಣದಲ್ಲಿ ಹೇಳಿಕೊಳ್ಳಲು ಕಂಟ್ರೋಲ್ ಅಧಿಕಾರಿಗಳು ಇಲ್ಲದ ಕಾರಣ ಬಸ್ ನಿಲ್ಲಿಸಿ ಪ್ರತಿಭಟಿಸಿದ್ದೇವೆ.
-ವಿಜುಗೌಡ ಪಾಟೀಲ ಹಾಗೂ ವಿದ್ಯಾರ್ಥಿಗಳು.
ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ಇಂದು ಇಲ್ಲದ ಕಾರಣ ಹಾಗೂ ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ಸಮಸ್ಯೆಯಾಗಿದೆ. ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಂದಗಿ ಡಿಪೋದಿಂದ ಇನ್ನೂ ಎರಡು ಬಸ್ ಬಿಡುತ್ತೇವೆ. ಇಂಡಿ ಡಿಪೋದಿಂದ ಬರುತ್ತಿರುವ ಬಸ್ಸು ನಿಲ್ಲಿಸಿದ್ದಾರೆ. ಮೇಲಾಧಿಕಾರಿಗಳ ಜೊತೆ ಮಾತನಾಡುತ್ತೇವೆ.
-ರೇವಣಸಿದ್ದ ಖೈನೂರ. ಘಟಕದ ವ್ಯವಸ್ಥಾಪಕರು ಸಿಂದಗಿ.
