ಉದಯವಾಹಿನಿ, ದೆಹಲಿ :ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಶನಿವಾರ ತಮ್ಮ ಪತ್ನಿ ಪ್ರಿಯಾಂಕಾ ಗಾಂಧಿಗೆ ಸಂಸತ್ತಿನಲ್ಲಿ ಇರಲು ಬೇಕಾದ ಎಲ್ಲ ಅರ್ಹತೆಗಳಿವೆ ಮತ್ತು ಆಕೆ ಸಂಸತ್ತಿನಲ್ಲಿಯೇ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಆಕೆಯ ಲೋಕಸಭೆ ಪ್ರವೇಶಕ್ಕೆ ಕಾಂಗ್ರೆಸ್ ಯೋಜನೆ ರೂಪಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಅವರು ಲೋಕಸಭೆಯಲ್ಲಿ ಖಚಿತವಾಗಿ ಇರಬೇಕು. ಆಕೆಗೆ ಎಲ್ಲ ಅರ್ಹತೆಗಳಿವೆ. ಅವರು ಸಂಸತ್ತಿನಲ್ಲಿ ಉತ್ತಮ ಸಂಸದೆಯಾಗಿರುತ್ತಾರೆ. ಕಾಂಗ್ರೆಸ್ ಅವರನ್ನು ಸ್ವೀಕರಿಸುತ್ತದೆ ಮತ್ತು ಅದಕ್ಕಾಗಿ ಉತ್ತಮ ಯೋಜನೆ ರೂಪಿಸುತ್ತದೆ ಎಂದು ನಾನು
ಭಾವಿಸುತ್ತೇನೆ’ ಎಂದು ತಿಳಿಸಿದರು.
ಸಂಸತ್ತಿನಲ್ಲಿ ಮಾತನಾಡುವಾಗ ಉದ್ಯಮಿ ಗೌತಮ್ ಅದಾನಿಯೊಂದಿಗೆ ತಮ್ಮ ಹೆಸರನ್ನು ಜೊತೆಗೂಡಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ವಾದ್ರಾ ವಾಗ್ದಾಳಿ ನಡೆಸಿದರು. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ, ಇರಾನಿ ಅವರು ಅದಾನಿ ಜೊತೆಗೆ ವಾದ್ರಾ ಇರುವ ಚಿತ್ರವನ್ನು ಪ್ರದರ್ಶಿಸಿದ್ದರು.
ನಾನು ರಾಜಕೀಯದಿಂದ ದೂರ ಉಳಿದಿದ್ದೇನೆ. ಆದರೆ, ನನ್ನ ಹೆಸರಿಗಾಗಿ ಹೋರಾಡಲು ನಾನು ಮಾತನಾಡುತ್ತೇನೆ. ಏಕೆಂದರೆ, ಅವರು ನನ್ನ ವಿರುದ್ಧ ಏನಾದರೂ ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಬೇಕು ಎಂದು ಸ್ಮೃತಿ ಇರಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ನಾನು ಅದಾನಿಯೊಂದಿಗೆ ಏನು ಸಂಬಂಧ ಹೊಂದಿದ್ದೇನೆ ಎಂಬುದನ್ನು ತೋರಿಸಿ ಎಂದು ನಾನು ಅವರಿಗೆ ಸವಾಲು ಹಾಕುತ್ತೇನೆ. ಯಾವುದೇ ತಪ್ಪಾಗಿದ್ದರೆ ನಾನು ಅದನ್ನು ನಿಭಾಯಿಸುತ್ತೇನೆ. ಇಲ್ಲದಿದ್ದರೆ, ಅವರು ಕ್ಷಮೆ ಯಾಚಿಸಬೇಕು ಮತ್ತು ಅವರ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ರಾಬರ್ಟ್ ವಾದ್ರಾ ಹೇಳಿದರು.
