ಉದಯವಾಹಿನಿ,ಮಧ್ಯಪ್ರದೇಶ : ಬಿಜೆಪಿ ಸರ್ಕಾರದ ವಿರುದ್ಧ ಶೇ.50 ಕಮಿಷನ್‌ ಆರೋಪ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ‘ಎಕ್ಸ್’ (ಟ್ವಿಟರ್‌) ಖಾತೆಗಳ “ನಿರ್ವಹಿಸುವವರ” ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಇಂದೋರ್ ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಆಗಿರುವ ಎಕ್ಸ್‌ನಲ್ಲಿ ಜ್ಞಾನೇಂದ್ರ ಅವಸ್ಥಿ ಎಂಬ ವ್ಯಕ್ತಿಯ ಹೆಸರನ್ನು ಹೊಂದಿರುವ ನಕಲಿ ಪತ್ರವನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ಬಿಜೆಪಿ ಕಾನೂನು ಘಟಕ ಸಂಚಾಲಕ ನಿಮೇಶ್ ಪಾಠಕ್ ದೂರು ನೀಡಿರುವುದಾಗಿ ಇಂದೋರ್ ಪೊಲೀಸ್ ಕಮಿಷನರ್ ಶನಿವಾರ ತಡರಾತ್ರಿ ಹೇಳಿದ್ದಾರೆ. ಪತ್ರದಲ್ಲಿ ಶೇ 50 ಕಮಿಷನ್ ನೀಡುವಂತೆ ರಾಜ್ಯದ ಗುತ್ತಿಗೆದಾರರಿಗೆ ಕೇಳಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಶುಕ್ರವಾರ ಪ್ರಿಯಾಂಕಾ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಅದರಲ್ಲಿ, ಮಧ್ಯಪ್ರದೇಶದ ಗುತ್ತಿಗೆದಾರರ ಒಕ್ಕೂಟ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದೆ. ಅವರು ಶೇ. 50 ಕಮಿಷನ್ ಪಾವತಿಸಿದ ನಂತರವೇ ಅವರ ಹಣ ಬಿಡುಗಡೆಯಾಗುತ್ತದೆ ಎಂದು ದೂರಿದ್ದರು. ಕರ್ನಾಟಕದ ಭ್ರಷ್ಟ ಬಿಜೆಪಿ ಸರ್ಕಾರ ಶೇ. 40 ಕಮಿಷನ್ ಸಂಗ್ರಹಿಸುತ್ತಿತ್ತು. ಮಧ್ಯಪ್ರದೇಶದಲ್ಲಿ ಬಿಜೆಪಿಯ ಭ್ರಷ್ಟಾಚಾರ ತನ್ನದೇ ದಾಖಲೆಯನ್ನು ಮುರಿದಿದೆ. ಕರ್ನಾಟಕದ ಜನರು ಶೇ 40 ಕಮಿಷನ್ ಸರ್ಕಾರವನ್ನು ಕಿತ್ತೊಗೆದಿದ್ದಾರೆ. ಈಗ ಮಧ್ಯಪ್ರದೇಶದ ಜನರು ಶೇ. 50 ಕಮಿಷನ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದರು.
ನಗರದ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಅವಸ್ಥಿ ಹಾಗೂ ವಾದ್ರಾ, ನಾಥ್ ಮತ್ತು ಅರುಣ್ ಯಾದವ್ ಅವರ ‘ಎಕ್ಸ್’ ಖಾತೆಗಳ “ನಿರ್ವಹಿಸುವವರ” ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಾಠಕ್ ಅವರ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಠಕ್ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ಸುಳ್ಳು ಆರೋಪ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!