ಉದಯವಾಹಿನಿ ಕುಶಾಲನಗರ : – ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ಮೂಲಕ  ಯಾವುದೇ ಸೊಳ್ಳೆಗಳು  ಉತ್ಪತ್ತಿಯಾಗದಂತೆ ಮುಂಜಾಗ್ರತೆ ವಹಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯ.ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕೆ.ಎಂ.ಸತೀಶ್ ಕುಮಾರ್ ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿರಾಜಪೇಟೆ ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಅಂಗವಾಗಿ ಡೆಂಗ್ಯೂ, ಮಲೇರಿಯಾ ಇನ್ನಿತರ ಸಾಂಕ್ರಾಮಿಕ ರೋಗಗಳ ಕುರಿತಂತೆ “ಆರೋಗ್ಯ ಅರಿವು” ಕಾರ್ಯಕ್ರಮದಡಿ ಏರ್ಪಡಿಸಿದ್ದ  ಕಾರ್ಯಾಗಾರದಲ್ಲಿ”ರೋಗವಾಹಕಗಳ ನಿಯಂತ್ರಣ” ಕುರಿತ ಕೈಪಿಡಿ ಬಿಡುಗಡೆಗೊಳಿಸಿ ಆರೋಗ್ಯ ಮಾಹಿತಿ ನೀಡಿದರು.ಸೊಳ್ಳೆಗಳ ನಿಯಂತ್ರಣ ಮಾಡುವ ಮೂಲಕ ನವೀನ ವಿಧಾನವನ್ನು ಅಳವಡಿಸಿ ಅನುಷ್ಠಾನಗೊಳಿಸುವ ಮೂಲಕ 2025 ರ ವೇಳೆಗೆ ಶೂನ್ಯ ಮಲೇರಿಯಾವನ್ನು ತಲುಪಲು ಆರೋಗ್ಯ ಇಲಾಖೆಯು ಕಾರ್ಯಯೋಜನೆ ರೂಪಿಸಿಕೊಂಡಿದೆ ಎಂದು ಡಾ ಸತೀಶ್ ಕುಮಾರ್ ತಿಳಿಸಿದರು. ಜಿಲ್ಲೆಯಲ್ಲಿ ಈ ವರ್ಷದಲ್ಲಿ ಈ ತನಕ 92 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಮಳೆ ಕ್ಷೀಣಿಸಿದಂತೆ ಡೆಂಗ್ಯೂ ರೋಗ ಕ್ರಮೇಣವಾಗಿ ಕ್ಷೀಣಿಸಿದೆ ಎಂದರು.ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಎಲ್ಲಾ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದರು.ಕಾರ್ಯಾಗಾರವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್  ಉದ್ಘಾಟಿಸಿ ಮಾತನಾಡಿದರು
ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣಾಧಿಕಾರಿ ಡಾ|ಬಿ.ಎಲ್. ಶ್ರೀನಿವಾಸ್,ರೋಗವಾಹಕ ಆಶ್ರಿತ ರೋಗಗಳ ಹರಡುವಿಕೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು.
ವಿರಾಜಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಯತಿರಾಜ್ , ಮನೆ ಮತ್ತು ಸುತ್ತಮುತ್ತಲಿನ‌ ಸ್ಥಳಗಳಲ್ಲಿ ಟೈರುಗಳು, ತೆಂಗಿನ ಚಿಪ್ಪುಗಳಲ್ಲಿ ಹಾಗೂ ಮನೆಯ ನೀರಿನ ಮೂಲಗಳನ್ನು ಸೊಳ್ಳೆ ಪ್ರವೇಶಿಸದಂತೆ ಎಚ್ಚರಿಕೆವಹಿಸಿ ರೋಗಗಳು ಬಾರದಂತೆ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.ಸ್ವಚ್ಛ ಪರಿಸರ  ಹಾಗೂ ಆರೋಗ್ಯ ಅರಿವು ಕುರಿತು ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ,ಟಿ.ಜಿ.ಪ್ರೇಮಕುಮಾರ್, ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಕುರಿತು ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ವಿವರಿಸಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ , ಸ್ಲೈಡ್ಸ್ ಗಳ ,ಮೂಲಕ ಮಾಹಿತಿ ನೀಡಿದರು. ಕಾರ್ಯಾಗಾರದ ಸಂಯೋಜಕ ಜಿ.ಶ್ರೀಹರ್ಷ, ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!