
ಉದಯವಾಹಿನಿ,ಶಿಡ್ಲಘಟ್ಟ :ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶ್ರದ್ದೆ, ಪರಿಶ್ರಮದ ಜೊತೆಗೆ ಗುರಿ ಹೊಂದಿರಬೇಕು ಎಂದು ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಜಿಲ್ಲಾ ಸಂಚಾಲಕ ಸುಧಾಕರ್ ಹೇಳಿದರು.ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪಾಠ ಪ್ರವಚನಗಳ ಜೊತೆ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳು ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವ ಬೆಳೆಸಬೇಕು. ಜೀವನದಲ್ಲಿ ಉನ್ನತವಾದ ಸ್ಥಾನ ಪಡೆಯಲು ಕಠಿಣ ಪರಿಶ್ರಮ ಶ್ರದ್ಧೆ ಮುಖ್ಯ ಪ್ರೌಢಶಾಲಾ ಹಂತದಲ್ಲಿ ಪಡೆದ ಶಿಕ್ಷಣ ಉನ್ನತವಾದ ಗುರಿಗಳನ್ನು ಸಾಧಿಸಲು ಪ್ರೇರಣೆ ನೀಡುತ್ತದೆ. ಇಲ್ಲಿ ಕಲಿತ ವಿದ್ಯೆ ನಿಮಗೆ ಸಾರ್ಥಕ ಬದುಕಿಗೆ ದಾರಿ ದೀಪವಾಗಲಿದೆ. ಭಾರತೀಯ ಸಂಸ್ಕೃತಿಯ ರಾಮಾಯಣ, ಮಹಾಭಾರತ ದಂತಹ ಮಹಾಕಾವ್ಯಗಳನ್ನು ಪ್ರತಿಯೊಬ್ಬರೂ ಓದಿ ತಿಳಿಯಿರಿ ಎಂದರು.ದೇಶ, ಧರ್ಮ, ಸಂಸ್ಕೃತಿ ಸೇರಿದಂತೆ ಗುರು ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಿ, ಮೊಬೈಲ್ ದಾಸರಾಗದೆ ನಿಮ್ಮ ಬಿಡುವಿನ ಸಮಯದಲ್ಲಿ ಅಧ್ಯಯನ ಮಾಡಿ ಶಾಲೆಯಲ್ಲಿನ ಪುಸ್ತಕ ಬಂಡಾರದ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದರು.ವಾಸವಿ ವಿದ್ಯಾಸಂಸ್ಥೆಯ ಅದ್ಯಕ್ಷ ಟಿ.ಎ.ಕೃಷ್ಣಯ್ಯಶೆಟ್ಟಿ ಮಾತನಾಡಿ ಮಕ್ಕಳು ಬಾಲ್ಯದಿಂದಲೇ ವಿನಯ ರೂಡಿಸಿಕೊಂಡರೆ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರೂಪಸಿರಮೇಶ್, ನಿರ್ದೇಶಕ ವಿ.ಎಸ್.ರಾಜೇಶ್, ಮುಖ್ಯ ಶಿಕ್ಷಕ ಹೆಚ್.ಎಸ್.ಶಿವಕುಮಾರ್, ಶಿಕ್ಷಕ ಸಿ.ಎಸ್.ರವಿ ಹಾಜರಿದ್ದರು.
