ಉದಯವಾಹಿನಿ, ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ವರುಣ ಆರ್ಭಟಕ್ಕೆ ಶಿವನ ದೇವಾಲಯ ಬಳಿ ಭೂಕುಸಿತ ಹಾಗೂ ಮೇಘಸ್ಫೋಟಕ್ಕೆ ಒಟ್ಟು ೨೧ ಮಂದಿ ಸಾವನ್ನಪ್ಪಿದ್ದಾರೆ. ಕಳೆದ ೨೪ ತಾಸುಗಳಲ್ಲಿ ಸುರಿದು ಭಾರೀ ಮಳೆಯಿಂದಾಗಿ ಶಿಮ್ಲಾ ನಗರದಲ್ಲಿ ಶಿವನ ದೇವಾಲಯ ಕುಸಿದು ಬಿದ್ದಿದೆ. ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆಯಿದ್ದು ಪರಿಹಾರ ಕಾರ್ಯ ಚುರುಕುಗೊಳಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ೨ ಪ್ರತ್ಯೇಕ ಪ್ರಕರಣಗಳಲ್ಲಿ ೨೧ ಮಂದಿ ಮೃತಪಟ್ಟಿರುವುದನ್ನು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ. ರಾಜ್ಯದಾದ್ಯಂತ ಧಾರಾಕಾರ ಮಳೆಸುರಿಯುತ್ತಿದ್ದು, ಜನರು ಹೊರಗೆ ಬರದಂತೆ ಮನವಿ ಮಾಡಿದ್ದಾರೆ. ಪ್ರವಾಸಿಗರು ಭೂಕುಸಿತದಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಶಿಮ್ಲಾ ನಗರದ ಸಮ್ಮರ್ ಹಿಲ್ ಪ್ರದೇಶದ ಶಿವನ ದೇವಾಲಯದ ಬಳಿ ಭೂಕುಸಿತ ಸಂಭವಿಸಿ ೯ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾಸ್ಥಳಕ್ಕೆ ಪರಿಹಾರ ತಂಡಗಳು ಭೇಟಿ ನೀಡಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಪರಿಹಾರ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ೧೫ರಿಂದ ೨೦ ಮಂದಿ ಸಾವನ್ನಪ್ಪಿರುವ ಸಂಖ್ಯೆಯಿದೆ ಎಂದು ಶಿಮ್ಲಾ ನಗರದ ಆಯುಕ್ತ ಆದಿತ್ಯನೇಗಿ ತಿಳಿಸಿದ್ದಾರೆ.ಫಾಗ್ಲಿ ಪ್ರದೇಶದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದು ಈ ಪ್ರದೇಶಗಳಲ್ಲಿ ಹಲವಾರು ಮನೆಗಳು ಕುಸಿದು ಬಿದ್ದಿವೆ. ಸೋಲ್ಲನ್ ಪ್ರದೇಶದ ಕಾಂಡಾ ಘಾಟ್ ಉಪವಲಯದ ಮಾಮ್ ಲೀಗ್ ಗ್ರಾಮದಲ್ಲಿ ೬ ಮಂದಿಯನ್ನು ರಕ್ಷಿಸಲಾಗಿದೆ. ಒಟ್ಟಾರೆ ಕಳೆದ ೪೮ ಗಂಟೆಗಳ ಅವಧಿಯಲ್ಲಿ ಮಳೆ ಸಂಭವಿಸಿದ ದುರಂತಗಳಲ್ಲಿ ೨೧ ಮಂದಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!