ಉದಯವಾಹಿನಿ, ದೇವರಹಿಪ್ಪರಗಿ: ಹಿರಿಯರ ತ್ಯಾಗ,ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಅದರ ಘನತೆ ಗೌರವ ಕಾಪಾಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಸ್ವಾತಂತ್ರ್ಯ ಪಡೆಯಲು ಹೋರಾಡಿದ ವೀರ ಮಹನೀಯರನ್ನು ಸ್ಮರಿಸುವುದು ಅತ್ಯಗತ್ಯವಾಗಿದೆ ಎಂದು ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.ಪಟ್ಟಣದಲ್ಲಿ ಮಂಗಳವಾರದಂದು ಶಾಸಕರ ಮಾದರಿ ಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ,ಗೌರವರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲಿ ಶಾಸಕನಾಗಿದ್ದೇನೆ. ನಮ್ಮ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ ಸಂದಿರುವ ಸಂದರ್ಭದಲ್ಲಿ ನಾನು ಕ್ಷೇತ್ರದ ಶಾಸಕನಾಗಿದ್ದೆ ಎಂಬುವುದೇ ಹೆಮ್ಮೆಯ ಸಂಗತಿ. ನೀವೆಲ್ಲರ ನಿರೀಕ್ಷೆಯಂತೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಆಶೀರ್ವಾದ ಮಾಡಿದ್ದೀರಿ.ಇಂತಹ ಅವಕಾಶವನ್ನು ಕಲ್ಪಿಸಿಕೊಟ್ಟ ಕ್ಷೇತ್ರದ ಮತದಾರರಿಗೆ ನಾನು ಆಭಾರಿಯಾಗಿದ್ದೇನೆ. ಬರುವಂತ ದಿನಗಳಲ್ಲಿ ಎಲ್ಲಾ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ನೂತನ ತಾಲೂಕು ಆದರೂ ಯಾವುದೇ ಕಚೇರಿ ಇಲ್ಲದ ಕಾರಣ ಬರುವಂತ ದಿನಗಳಲ್ಲಿ ಪಟ್ಟಣದಲ್ಲಿ ತಾಲೂಕು ಕಚೇರಿ, ಬಿಇಒ ಕಚೇರಿ, ತಾಪಂ ಸೇರಿದಂತೆ ಹಲವು ಕಚೇರಿಗಳನ್ನು ತರಲು ಪ್ರಯತ್ನಿಸುತ್ತೇನೆ. ಸಬ್ ರಿಜಿಸ್ಟರ್ ಆಫೀಸ್ ಹಾಗೂ ಪಟ್ಟಣದ ಬಸ್ ನಿಲ್ದಾಣಕ್ಕೆ ಶರಣರ ಹೆಸರಿಡಲು ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದ್ದೇನೆ.
ಶೈಕ್ಷಣಿಕ ದೃಷ್ಟಿಯಿಂದ ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಹಾಗೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣದ ಕಾಮಗಾರಿ ಶೀಘ್ರದಲ್ಲಿ ನೆರವೇರಿಸಲಾಗುವುದು. ಮುಂಗಾರು ಮಳೆ ವಿಳಂಬದಿಂದ ರೈತಾಪಿ ವರ್ಗ ತೀವ್ರ ತೊಂದರೆಯಲ್ಲಿದ್ದು ಇದನ್ನು ಅರಿತು ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಅಧಿಕಾರಿಗಳ ಸಹಕಾರದಿಂದ ಬರದಿಂದ ಸಾಗಿದೆ. ಪಟ್ಟಣ ಸೇರಿದಂತೆ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿಮ್ಮೆಲ್ಲರ ಆಶೀರ್ವಾದ ಸಹಕಾರದಿಂದ ಮಾದರಿ ಕ್ಷೇತ್ರ ಮಾಡಲು ಶ್ರಮಿಸುತ್ತೇನೆ ಎಂದು ಹೇಳಿದರು. ತಹಶೀಲ್ದಾರ್ ಪ್ರಕಾಶ ಸಿಂದಗಿ, ಉಪತಹಶೀಲ್ದಾರುಗಳಾದ ಮಹಿಪತಿ ದೇಸಾಯಿ, ಎಸ್ ಎಸ್ ತಾವರಖೇಡ, ಇಂದಿರಾ ಬಳಗನೂರ,ಪ ಪಂ ಮುಖ್ಯಾಧಿಕಾರಿ ಎಲ್ ಡಿ ಮುಲ್ಲಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು,ಪ ಪಂ ಸದಸ್ಯರು, ಪಟ್ಟಣದ ಪ್ರಮುಖರು, ಗಣ್ಯರು, ಕಂದಾಯ, ಪ ಪಂ ಇಲಾಖೆ ಸಿಬ್ಬಂದಿ ವರ್ಗ, ಜೆಡಿಎಸ್ ಪಕ್ಷದ ಮುಖಂಡರು,ಕಾರ್ಯಕರ್ತರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
