ಉದಯವಾಹಿನಿ, ಬೀದರ್ : ಭಾಲ್ಕಿ ಹಾಗೂ ಔರಾದನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ್ದು, ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಔರಾದ್‍ನ ಮುಖಂಡ ದೀಪಕ ಪಾಟೀಲ ಚಾಂದೋರಿ ಆರೋಪಿಸಿದ್ದಾರೆ.
ತಾಲ್ಲೂಕು ಆಡಳಿತ ವತಿಯಿಂದ ಬಸವಕಲ್ಯಾಣ ಹಾಗೂ ಹುಮನಾಬಾದ್‍ನಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲಿಸಲಾಗಿದೆ. ಆದರೆ, ಔರಾದ್ ಹಾಗೂ ಭಾಲ್ಕಿಯಲ್ಲಿ ಮಾತ್ರ ಉದ್ದೇಶಪೂರ್ವಕವಾಗಿ ಕೇಂದ್ರ ಸಚಿವರ ಹೆಸರು ಸೇರಿಸಲಾಗಿಲ್ಲ ಎಂದು ಆಪಾದಿಸಿದ್ದಾರೆ.
ದೇಶದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶದ ಸಚಿವರೊಬ್ಬರನ್ನು ಅವಮಾನಿಸಿರುವುದು ಖಂಡನೀಯ. ಹಕ್ಕುಚ್ಯುತಿಯ ಅತ್ಯಂತ ಗಂಭೀರ ವಿಷಯ ಎಂದು ಹೇಳಿದ್ದಾರೆ.
ಹೆಸರು ಸೇರಿಸುವುದರಿಂದ ಅಥವಾ ಕೈಬಿಡುವುದರಿಂದ ಯಾರೂ ದೊಡ್ಡವರು ಇಲ್ಲವೇ ಸಣ್ಣವರಾಗುವುದಿಲ್ಲ. ಆಯಾ ಹುದ್ದೆಗೆ ತಕ್ಕಂತೆ ಗೌರವ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ. ಎರಡು ತಾಲ್ಲೂಕುಗಳಲ್ಲಷ್ಟೇ ಹೆಸರು ಕೈಬಿಟ್ಟಿರುವುದು ಕ್ಷುಲ್ಲಕ ರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೊಂದಾಣಿಕೆ ರಾಜಕೀಯಕ್ಕೂ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಶಿಷ್ಟಾಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗೆ ಕರೆ ಮಾಡಿದರೆ ಸ್ವೀಕರಿಸಿಲ್ಲ. ಔರಾದ್ ತಹಶೀಲ್ದಾರ್ ಮಲಶೆಟ್ಟಿ ಅವರನ್ನು ವಿಚಾರಿಸಿದರೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ನಿರ್ದೇಶನದಂತೆ ಕೇಂದ್ರ ಸಚಿವರ ಹೆಸರು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಷ್ಟಾಚಾರ ಉಲ್ಲಂಘನೆ ಕಾರಣಕ್ಕೆ ಜಿಲ್ಲಾ ಆಡಳಿತ ಕೂಡಲೇ ಸಾರ್ವಜನಿಕ ಕ್ಷಮೆ ಯಾಚಿಸಬೇಕು. ಔರಾದ್ ತಹಶೀಲ್ದಾರ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ವಾರದೊಳಗೆ ಈ ಸಂಬಂಧ ಕ್ರಮ ಕೈಗೊಳ್ಳದಿದ್ದರೆ ಭಗವಂತ ಖೂಬಾ ಅಭಿಮಾನಿ ಬಳಗದಿಂದ ಔರಾದ್ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಗುವುದು. ಲೋಕಸಭೆ ಹಾಗೂ ವಿಧಾನಸಭಾಧ್ಯಕ್ಷರಿಗೆ ದೂರು ಕೊಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಖೂಬಾ ಬೆಳವಣಿಗೆ ಸಹಿಸಲಾಗುತಿಲ್ಲ: ಭಗವಂತ ಖೂಬಾ ಅವರ ಮೂಲಕ ಜಿಲ್ಲೆಗೆ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ದೊರೆತಿದೆ. ಅವರು ಕಳಂಕ ರಹಿತ ಆಡಳಿತ ನೀಡುತ್ತಿದ್ದಾರೆ. ದಿನೇ ದಿನೇ ಅವರ ಜನಪ್ರಿಯತೆ ಹೆಚುತ್ತಲೇ ಇದೆ. ಔರಾದ್ ಶಾಸಕರಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಆದ್ದರಿಂದ ಖೂಬಾ ಅವರ ಹೆಸರು ಕೆಡಿಸಲು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಅವರಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಖೂಬಾ ಅವರನ್ನು ಹೆಣೆಯಲು ನಡೆಸುತ್ತಿರುವ ಪ್ರಯತ್ನ ಸೂರ್ಯನ ಮೇಲೆ ಉಗುಳಿದಂತೆ. ಸೂರ್ಯನ ಮೇಲೆ ಉಗುಳಲು ಪ್ರಯತ್ನಿಸಿದರೆ ತಮ್ಮ ಮೇಲೆಯೇ ಬೀಳುತ್ತದೆ ಎನ್ನುವ ಪರಿಜ್ಞಾನವೂ ಇವರಗಿಲ್ಲ ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!