ಉದಯವಾಹಿನಿ, ಕೇಪ್ ವಾರ್ಡೆ: ಉತ್ತಮ ಜೀವನ ಸೌಲಭ್ಯ ಹಾಗೂ ಗುಣಮಟ್ಟದ ಉದ್ಯೋಗಕ್ಕಾಗಿ ಅಕ್ರಮವಾಗಿ ಹೊರದೇಶಗಳಿಗೆ ಹೋಗುವ ಭರದಲ್ಲಿ ಬೋಟ್ ಅವಘಡದಲ್ಲಿ ಮೃತಪಡುವವರ ಸಂಖ್ಯೆ ಮತ್ತೆ ಮುಂದುವರೆದಿದೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಒಂದು ನಿಯಂತ್ರಣ ತಪ್ಪಿ ಮುಳುಗಿ ೬೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಪಶ್ಚಿಮ ಆಫ್ರಿಕಾದ ಕೇಪ್ ವಾರ್ಡೆ ಬಳಿ ನಡೆದಿದೆ.
ಘಟನೆಯಲ್ಲಿ ಮಕ್ಕಳೂ ಸೇರಿ ೩೮ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಒಂದು ತಿಂಗಳಿನಿಂದಲೂ ಹೆಚ್ಚು ಕಾಲ ಸಮುದ್ರದಲ್ಲಿ ಪಯಣ ನಡೆಸುತ್ತಿದ್ದ ಬೋಟ್‌ನಲ್ಲಿ ಬಹುತೇಕ ಮಂದಿ ಸೆನೆಗಲ್ ದೇಶದ ನಾಗರಿಕರು ಎನ್ನಲಾಗಿದೆ. ಸೋಮವಾರದಂದು ಮೊದಲ ಬಾರಿಗೆ ಬೋಟನ್ನು ಪತ್ತೆಹಚ್ಚಲಾಗಿತ್ತು. ಆರಂಭಿಕ ವರದಿಯ ಪ್ರಕಾರ ಮುಳುಗಡೆಯಾಗಿತ್ತು ಎನ್ನಲಾಗಿತ್ತು. ಆದರೆ ಬಳಿಕ ಬೋಟ್ ಸಮುದ್ರದಲ್ಲಿ ತೇಲುತ್ತಿದೆ ಎಂದು ಸ್ಪಷ್ಟನೆ ನೀಡಲಾಯಿತು. ಇನ್ನು ಬದುಕುಳಿದವರಲ್ಲಿ ೧೨ ರಿಂದ ೧೬ ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ಇಂಟರ್‌ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ (ಐಒಎಂ) ವಕ್ತಾರರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆನೆಗಲ್‌ನ ವಿದೇಶಾಂಗ ಸಚಿವಾಲಯ, ಬೋಟ್ ಜುಲೈ ೧೦ ರಂದು ೧೦೧ ಮಂದಿ ವಲಸಿಗರೊಂದಿಗೆ ಸೆನೆಗಲ್‌ನ ಮೀನುಗಾರಿಕಾ ಗ್ರಾಮ ಫಾಸ್ಸೆ ಬೊಯೆಯಿಂದ ಹೊರಟಿತ್ತು. ಸೆನೆಗಲ್ ಪ್ರಜೆಗಳ ವಾಪಸಾತಿಗೆ ವ್ಯವಸ್ಥೆ ಮಾಡಲು ಕೇಪ್ ವರ್ಡೆಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದೇವೆ ಎಂದು ತಿಳಿಸಿದೆ.
