ಉದಯವಾಹಿನಿ: ಇದೊಂದು ಉತ್ಕೃಷ್ಟವಾದ ಹಣ್ಣು. ಇದನ್ನು ಬಡವರ ಸೇಬು ಅಂದರೂ ತಪ್ಪಾಗಲಿಕ್ಕಿಲ್ಲ. ಇದು ಉಷ್ಣ ಪ್ರದೇಶ ಹಾಗೂ ಸಮಶೀತೋಷ್ಣ ಪ್ರದೇಶದಲ್ಲಿ ಬೆಳೆಯುವ ಹಣ್ಣು. ಶೀತಗುಣ ಉಳ್ಳದ್ದು ಹಾಗೂ ರುಚಿಕರವಾದದ್ದು, ಉಷ್ಣ ಪ್ರಕೃತಿಯವರಿಗೆ ಹಾಗೂ ಪಿತ್ತ ಪ್ರಕೃತಿಯ ದೇಹವಿರುವವರಿಗೆ ಇದು ಉತ್ತಮ ಆಹಾರ. ವಾತ ಪ್ರಕೃತಿಯವರಿಗೆ ಇದರ ಬೀಜ ಸೇವನೆಯಿಂದ ಹೊಟ್ಟೆನೋವು ಬರುವ ಸಾಧ್ಯತೆ ಇರುವುದರಿಂದ ಯಾರಾದರೂ ಅಲ್ಪ ಸೇವನೆ ಮಾಡುವುದು ಉತ್ತಮ.
ಇದರ ಬೇರು, ಎಲೆ, ಹೂ, ಹಣ್ಣುಗಳು ಬಹುಉಪಯುಕ್ತ. ಇದರಲ್ಲಿ
ಜೀವಸತ್ವಗಳಾದ ಎ, ಸಿ, ಇ, ಕೆ, ಸೋಡಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ಮೆಗ್ನೇಷಿಯಂ, ನಿಯೋಸಿನ್ ಎಂಬ ಪೋಷಕಾಂಶಗಳು ಇವೆ.೧. ಕಣ್ಣಿನ ಸಮಸ್ಯೆಗೆ: ಸೀಬೆ ಗಿಡದ ಹೂ ಹಾಗೂ ದಾಳಿಂಬೆ ಚಿಗುರು ಎರಡರ ರಸವನ್ನು ತೆಗೆದು ಕಣ್ಣಿಗೆ ೨-೨ ಹನಿ ಹಾಕುವುದರಿಂದ ಕಣ್ಣು ನೋವು, ಕಣ್ಣು ಕೆಂಪಾಗುವಿಕೆ ಕಡಿಮೆ ಆಗುತ್ತದೆ.
೨. ಪಿತ್ತದ ವಿಕಾರಗಳಿಗೆ : ಸೀಬೆ ಹೂ, ಗುಲಾಬಿ ಹೂ, ಲಾವಂಚ, ಏಲಕ್ಕಿ ೨ , ಲವಂಗ ೨, ಸೇರಿಸಿ ನೀರಿನಲ್ಲಿ ಅರೆದು ಶೋಧಿಸಿ ಸಕ್ಕರೆ, ನಿಂಬೆರಸ ಹಾಕಿ ಕುಡಿಯುವುದರಿಂದ ಪಿತ್ತದ ವಿಕಾರಗಳಾದ ಹೊಟ್ಟೆ ಉರಿ, ಬಾಯಾರಿಕೆ ಎಲ್ಲವೂ ಶಮನವಾಗುತ್ತದೆ.
೩.ಪಿತ್ತದ ಗಂಧೆಗಳು : ಇದಕ್ಕೆ ಸೀಬೆಯ ಚಿಗುರೆಲೆ ಮತ್ತು ಚೆಟ್ಟುಮೊಸರಿನಲ್ಲಿ ಅರೆದು ಲೇಪಿಸಿ.
೪. ಮಲಬದ್ದತೆಗೆ: ಇದರಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಆಹಾರವು ಜೀರ್ಣವಾಗುವುದಲ್ಲದೆ, ಮಲಬದ್ಧತೆಯು ನಿವಾರಣೆಯಾಗುತ್ತದೆ. ಊಟದ ನಂತರ ಸೇವಿಸಬೇಕು.
೫. ಅತಿಸಾರ: ಎಳೆಸೀಬೆಕಾಯಿಯನ್ನು ಹೋಳುಮಾಡಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಕಷಾಯ ಮಾಡಿ ಮಜ್ಜಿಗೆಯೊಡನೆ ಸೇವಿಸಬೇಕು.
೬. ಆಮಶಂಕೆ: ಸೀಬೆಗಿಡದ ಚಿಗುರೆಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಶೋಧಿಸಿ, ಆರಿದ ನಂತರ ಮಜ್ಜಿಗೆ ಬೆರೆಸಿ ಕುಡಿದರೆ ಆಮಶಂಕೆ ನಿವಾರಣೆಯಾಗುತ್ತದೆ.
೭. ಹಲ್ಲುನೋವಿಗೆ: ಸೀಬೆಗಿಡದ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ಅದನ್ನು ಬಾಯಿಗೆ ಹಾಕಿ ಮುಕ್ಕಳಿಸಿ ಉಗುಳಬೇಕು. ಇದರಿಂದ ನೋವು ಶಮನವಾಗುತ್ತದೆ. ಸೀಬೆಹಣ್ಣನ್ನು ಹಲ್ಲಿನಲ್ಲಿ ಕಚ್ಚಿ ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ ಮತ್ತು ವಸಡುಗಳು ಆರೋಗ್ಯಪೂರ್ಣವಾಗುತ್ತವೆ.
೮. ಮೊಡವೆಗೆ: ಈ ಗಿಡದ ಎಲೆಯನ್ನು ಅರೆದು ಮೊಡವೆಗೆ ಹಚ್ಚಿ.
೯. ಹೇನು, ಸೀರುವಿಗೆ: ತಲೆಯಲ್ಲಿ ಹೇನು, ಸೀರು ಕಾಣಿಸಿಕೊಂಡಾಗ ಸೀಬೆ ಎಲೆಯೊಂದಿಗೆ ಬೇವಿನೆಲೆ ಸೇರಿಸಿ ಅರೆದು ರಾತ್ರಿ ಮಲಗುವಾಗ ತಲೆಗೆ ಚೆನ್ನಾಗಿ ಹಚ್ಚಿ. ಬೆಳಿಗ್ಗೆ ತಲೆಗೆ ಸ್ನಾನ ಮಾಡುವುದರಿಂದ ಹೇನುಗಳನ್ನು ನಾಶಪಡಿಸಬಹುದಾಗಿದೆ. ೧೦. ಬಾಯಿಹುಣ್ಣಿಗೆ: ಈ ಗಿಡದ ಎಲೆಯನ್ನು ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಗುಣವಾಗುತ್ತದೆ.
