
ಉದಯವಾಹಿನಿ,ಅಫಜಲಪುರ: ಮುಂಗಾರು ಮಳೆ ಬಾರದೆ ರೈತರು ಸಂಕಷ್ಟದಲ್ಲಿರುವಾಗ ಸ್ಯಾಂಡೋಸ್ ಕಂಪನಿಯರವರು ಕಳಪೆ ಮಟ್ಟದ ಸೂರ್ಯಕಾಂತಿ ಬೀಜ ಮಾರಾಟ ಮಾಡಿದ್ದಾರೆ ಎಂದು ರೈತರು ಅಫಜಲಪುರ ಪಟ್ಟಣದ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ತಾಲೂಕಿನ ಬಳೂರ್ಗಿ ಗ್ರಾಮದ ರೈತ ಮಲ್ಲಿನಾಥ ಸೋಮಜಾಳ ಅವರು ತಮ್ಮ ಜಮೀನಿನಲ್ಲಿ ಸ್ಯಾಂಡೋಸ್ ಕಂಪನಿಯ ಬೀಜ ಬಿತ್ತನೆ ಮಾಡಿದ್ದು ಸೂರ್ಯಕಾಂತಿ ಬೆಳೆ ಮೊಳಕೆಯೊಡೆದ ಕೆಲವು ದಿನಗಳಲ್ಲೇ ಟಿಸಲೊಡೆಯುತ್ತಿದೆ. ಇದರಿಂದ ಸರಿಯಾಗಿ ತೆನೆ ಹಿಡಿಯುವುದಿಲ್ಲ. ಇದನ್ನು ಗಮನಿಸಿ ಕಂಪನಿಯವರಿಗೆ ಜಮೀನಿಗೆ ಕರೆಸಿಕೊಂಡು ತನಿಖೆ ಮಾಡಿಸಿದಾಗ ಅವರಿಗೂ ಸಮಸ್ಯೆ ಅರಿವಿಗೆ ಬಂದಿದೆ. ಆದರೆ ಸರಿಯಾಗಿ ಮಾಹಿತಿ ನೀಡದೆ ಹೋಗಿದ್ದಾರೆ. ಕೃಷಿ ಇಲಾಖೆಗೆ ಬನ್ನಿ ಎಂದರೆ ಬರುತ್ತೇನೆ ಎಂದವರು ಪಲಾಯಾನ ಮಾಡಿದ್ದಾರೆ ಎಂದು ರೈತ ಮಲ್ಲಿನಾಥ ಸೋಮಜಾಳ ಅಳಲು ತೋಡಿಕೊಂಡಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಮಾತನಾಡಿ ಸರಿಯಾಗಿ ಮಳೆ ಬಾರದೆ ಮೊದಲೇ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಕಳಪೆ ಬೀಜ ಬಿತ್ತನೆ ಮಾಡಿ ರೈತರು ಕೈ ಸುಟ್ಟುಕೊಂಡಿದ್ದಾರೆ. ಕೂಡಲೇ ತಾವು ಇದನ್ನು ಗಂಭಿರವಾಗಿ ಪರಿಗಣಿಸಿ ರೈತರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಹಾದೇವಪ್ಪ ಶೇರಿಕಾರ, ಅಶೋಕ ಹೂಗಾರ, ಸಾವರಸಿದ್ದ ಜಮಾದಾರ,ಸಿದ್ದು ಮಣೂರ, ಪ್ರಕಾಶ ಫುಲಾರಿ,ಸೇರಿದಂತೆ ರೈತರು ಇದ್ದರು.
