
ಉದಯವಾಹಿನಿ ಶಿಡ್ಲಘಟ್ಟ: ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉಚಿತ ಉತ್ತಮ ಆರೋಗ್ಯ,ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಎಂವಿಜೆ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆ, ಗ್ರಾಮ ಪಂಚಾಯತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಲ್ಟಿ ಸ್ಪೆಷಾಲಿಟಿ ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು ಶಾಸಕ ಬಿಎನ್ ರವಿಕುಮಾರ್ ರವರು ಉದ್ಘಾಟಿಸಿದರು.
ಈ ತಾಲೂಕಿನ ಜನತೆಗೆ ಮೊದಲ ಆದ್ಯತೆಯಾಗಿ ಆರೋಗ್ಯ ಮತ್ತು ಶಿಕ್ಷಣವನ್ನು ರೂಪಿಸುವ ಸಲುವಾಗಿ ಇಂದು ಈ ಭಾಗದ ಜನರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಬಡಬಗ್ಗರಿಗೆ ಇಂದು ಹೆಚ್ಚಿನ ಹೊರೆ ಬೀಳುತ್ತಿರುವುದು ಶಿಕ್ಷಣ ಮತ್ತು ಆರೋಗ್ಯ. ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ ಪಾವತಿಸಲಾಗದೇ ಎಷ್ಟೋ ಜೀವಗಳು ಕಳೆದುಕೊಂಡಿದ್ದಾರೆ. ಅದೇ ರೀತಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲಕ್ಷ-ಲಕ್ಷ ಖರ್ಚಾಗುತ್ತಿದೆ. ಬಡವರು ಇಂತಹ ತೊಂದರೆಗಳು ಅನುಭವಿಸಭಾರದು ಎಂದು ಮಕ್ಕಳಿಗಾಗಿ ಉಚಿತ ಶಿಕ್ಷಣ, ಬಡಜನರಿಗಾಗಿ ಉಚಿತ ಆರೋಗ್ಯವನ್ನು ನಿಮ್ಮ ಗ್ರಾಮದಲ್ಲೇ ಸಿಗುವಂತಹ ಕೆಲಸ ಆಗಬೇಕಾಗಿದೆ. ಈ ಕ್ಷೇತ್ರದ ಸ್ವಾಭಿಮಾನಿ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ ಅವರು ನೆಮ್ಮದಿಯಿಂದ ಜೀವನ ಮಾಡಬೇಕೆಂಬುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಹಿಮೋಗ್ಲೋಬಿನ್, ರಕ್ತದ ಗುಂಪು, ಸಕ್ಕರೆ ಪ್ರಮಾಣ, ಥೈರಾಯ್ಡ್ ಪರೀಕ್ಷೆ, ಹೆಚ್‍ಬಿಎ1ಸಿ (ಸಕ್ಕರೆ ಕಾಯಿಲೆ ಪರೀಕ್ಷೆ), ಅಲ್ಟ್ರಾಸೋನೋಗ್ರಫಿ, ಇಸಿಜಿ,ಹೃದಯದ ಪರೀಕ್ಷೆ, ಎಲುಬು ಸಾಂದ್ರತೆ, ಸ್ತ್ರೀಯರಲ್ಲಿ ಬರುವ ಕ್ಯಾನ್ಸರ್ ಕಾಯಿಲೆಯ ಪರೀಕ್ಷೆ ಪತ್ತೆಗೆ ಪ್ಯಾಪ್ ಸ್ಮಿಯರ್ ಪರೀಕ್ಷೆ ಮಾಡಿಸಿಕೊಂಡರು. ಪ್ರಸೂತಿ ಹಾಗೂ ಸ್ತ್ರೀರೋಗ, ಚಿಕ್ಕ ಮಕ್ಕಳ, ಡಯಾಬಿಟಿಸ್ ಮತ್ತು ಹೃದಯರೋಗ, ಎಲುಬು ಮತ್ತು ಕೀಲು, ಶಸ್ತ್ರಚಿಕಿತ್ಸಾ ಹಾಗೂ ನೇತ್ರ ಚಿಕಿತ್ಸಾ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ಸೇವೆ ನೀಡಿದರು.
ಬಂಕ್ ಮುನಿಯಪ್ಪ,ಡಾ. ಪ್ರಮೋದ್,ಡಾ.ಅವಿನಾಶ್, ಎಂವಿಜೆ ಸಿಬ್ಬಂದಿ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಮತ್ತಿತರರು ಹಾಜರಿದ್ದರು.
