
ಉದಯವಾಹಿನಿ, ಬೀದರ್ :ಕಮಲನಗರ ತಾಲೂಕಿನ ಮದನೂರ ಗ್ರಾಮಕ್ಕೆ ಎರಡು ಎಕರೆ ಸ್ಮಶಾನ ಭೂಮಿ ಒದಗಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು ಕಮಲನಗರ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ, ಬೀದರ್ ಉಸ್ತುವಾರಿ ಸಚಿವ ಹಾಗೂ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಕಮಲನಗರ ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ ಅವರಿಗೆ ಅವರ ಮುಖಾಂತರವೇ ಮನವಿ ಪತ್ರ ಸಲ್ಲಿಸಿದ್ದಾರೆ.
ಗ್ರಾಮದ ಸಾಮಾನ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಸಮುದಾಯಕ್ಕೆ ಯಾವುದೇ ಸ್ಮಶಾನಭೂಮಿ ಇಲ್ಲದಿರುವುದರಿಂದ ಸಮುದಾಯಗಳಲ್ಲಿ ಸಾವುಗಳು ಸಂಭವಿಸಿದರೆ ಅವರನ್ನು ಮುಕ್ತಿ ಕಾರ್ಯ ಮಾಡಲು ಯಾವುದೇ ಸ್ಮಶಾನಭೂಮಿ ಗ್ರಾಮದಲ್ಲಿ ಲಭ್ಯ ಇಲ್ಲ ಇದರಿಂದ ತುಂಬಾ ತೊಂದರೆ ಉಂಟಾಗುತ್ತಿದೆ ಮತ್ತು ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಅಂತ್ಯ ಸಂಸ್ಕಾರದ ಕಾರ್ಯ ಕೈಗೊಳ್ಳುವಂತಾಗಿದೆ. ಕೆಲವೊಂದು ಕಡೆ ವಿರೋಧವು ವ್ಯಕ್ತವಾಗುತ್ತಿದೆ ಎಂದು ಗ್ರಾಮದ ಮುಖಂಡ ಸೂರ್ಯಕಾಂತ ಬಿರಾದರ್ ತಿಳಿಸಿದರು.
ರಾಜ್ಯ ಸರ್ಕಾರ 2020-21ನೇ ಸಾಲಿನಲ್ಲಿ ಕಂದಾಯ ಇಲಾಖೆಯ ವತಿಯಿಂದ ‘ಸಾರ್ವಜನಿಕ ಸ್ಮಶಾನ ಸೌಲಭ್ಯ ಒದಗಿಸಲು ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಿಗೆ ಅಗತ್ಯವಾದ ಭೂಮಿಯನ್ನು ಖಾಸಗಿ ಭೂ ಮಾಲೀಕರಿಂದ ನೇರವಾಗಿ ಖರೀದಿಸಿ ಸ್ಮಶಾನ ಭೂಮಿ ಸೌಲಭ್ಯ ಕಲ್ಪಿಸಲು ಜಮೀನು ಖರೀದಿಸಿ ಕಾಯ್ದಿರಿಸಲು ಅನುದಾನ ಬಿಡುಗಡೆ ಮಾಡಿದರು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗ್ರಾಮದ ಬಿಜೆಪಿ ಯುವ ಮುಖಂಡ ಮಲ್ಲಿಕಾರ್ಜುನ ಬಿರಾದರ್ ತಿಳಿಸಿದರು. ಈ ಯೋಜನೆ ಮದನೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ ಎಂಬುದು ಎದ್ದು ಕಾಣುತ್ತಿದೆ ಮೇಲ್ನೋಟಕ್ಕೆ ಎಂದು ಗ್ರಾಮದ ಗೋರಕಖನಾಥ ಸಾವಳೆ ಪ್ರತಿಪಾದಿಸಿದರು.
ಸರ್ಕಾರದ ಆದೇಶದಂತೆ ಜಮೀನುಗಳಲ್ಲಿ ಅವಶ್ಯಕ ನೀರು, ಆಸನಗಳ ವ್ಯವಸ್ಥೆ, ವಿದ್ಯುಚ್ಛಕ್ತಿ ಸೌಲಭ್ಯ ಕಲ್ಪಿಸಲು ಹಾಗೂ ಮರಗಿಡಗಳನ್ನು ಬೆಳೆಸುವುದು ಸೇರಿದಂತೆ ಸದರಿ ಸ್ಮಶಾನ ಜಮೀನು ಆತಿಕ್ರಮಣವಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ ಇಷ್ಟೆಲ್ಲ ಸರ್ಕಾರ ಮಾರ್ಗಸೂಚಿಗಳನ್ನು ಮತ್ತು ಆದೇಶ ಬಿಡುಗಡೆಗೊಂಡಿದ್ದರು ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸರ್ಕಾರ ಯಾವುದೇ ಕಾರ್ಯ ಕೈಗೊಂಡಿಲ್ಲ ಹಾಗಾಗಿ ತಾವುಗಳು ಮುತ್ತುವರ್ಜಿ ವಹಿಸಿ ಆದಷ್ಟು ಬೇಗ ಕ್ರಮ ಕೈಗೊಂಡು ಸ್ಮಶಾನಭೂಮಿ ಖರದಿ ಮತ್ತು ಅಭಿವೃದ್ಧಿ ಕಾರ್ಯರೂಪಕ್ಕೆ ತರಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
