
ಉದಯವಾಹಿನಿ, ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪ ಮಾಡಿ ರಾಜಕೀಯ ಬದಲಾವಣೆಗೆ ಕಾರಣವಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಸ್ತುತ ಕಾಂಗ್ರೆಸ್ ಸರ್ಕಾರಕ್ಕೂ ಬೆನ್ನು ಹತ್ತಿದ್ದು, ಬಾಕಿ ಬಿಲ್ ಪಾವತಿಗೆ ಗಡುವು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಪಂಚಖಾತ್ರಿ ಯೋಜನೆಗಳಿಗೆ ಹಣ ಖರ್ಚಾಗಿದೆ. ಹೀಗಾಗಿ ಬಾಕಿ ಬಿಲ್‍ಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಹಣ ಇಲ್ಲ. ಸ್ವಲ್ಪ ದಿನ ಸಹನೆಯಿಂದಿರುವಂತೆ ಸರ್ಕಾರ ಗುತ್ತಿಗೆದಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದೆ. ಇದನ್ನು ಒಪ್ಪದ ಗುತ್ತಿಗೆದಾರರು ಆ. 31 ರೊಳಗೆ ಬಾಕಿ ಬಿಲ್ ಪಾವತಿ ಮಾಡದೇ ಇದ್ದರೆ, ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದು, ಗುತ್ತಿಗೆ ವಿಭಾಗದಲ್ಲಿ ತೊಡಗಿಸಿಕೊಂಡಿರುವ 61 ಸಂಘಟನೆಗಳ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುವುದಾಗಿ ಸೂಚನೆ ನೀಡಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ- ಪಂಚಾಯತ್ ರಾಜ್, ಇಂಧನ, ಮೂಲ ಸೌಲಭ್ಯ ಸೇರಿದಂತೆ 7 ಕ್ಕೂ ಹೆಚ್ಚು ಇಲಾಖೆಗಳಿಂದ ಸುಮಾರು 25 ಸಾವಿರ ಕೋಟಿ ರೂ.ಗಳಿಗೂ ಅಕ ಮೊತ್ತದ ಬಾಕಿ ಪಾವತಿಯಾಗಬೇಕಿದೆ ಎಂದು ಹೇಳಲಾಗಿದೆ. ಆದರೆ ಸರ್ಕಾರದ ಜೊತೆ ಚರ್ಚೆ ನಡೆಸಿದ ಗುತ್ತಿಗೆದಾರರಿಗೆ ನಿರಾಶೆಯಾಗಿದೆ.
ಇತ್ತೀಚೆಗೆ ಗುತ್ತಿಗೆದಾರರ ಸಂಘದ ಪ್ರತಿನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆ ವೇಳೆ ಹಳೆಯ ಉತ್ತರವೇ ದೊರೆತಿದೆ. ಕೆಲವು ಕಾಮಗಾರಿಗಳು ಅನುಮಾನಸ್ಪದವಾಗಿದ್ದು, ಅವುಗಳ ಪರಿಶೀಲನೆ ಮಾಡದೇ ಬಾಕಿ ಪಾವತಿ ಮಾಡಲು ಸಾಧ್ಯವಿಲ್ಲ. ಮೂರು ವರ್ಷಗಳಿಂದ ಸುಮ್ಮನಿದ್ದು, ಈಗ ಮೂರು ತಿಂಗಳಲ್ಲಿ ಬಾಕಿ ಪಾವತಿ ಮಾಡುವಂತೆ ಒತ್ತಡ ಹೇರುತ್ತಿರುವುದೇಕೆ, ಪರಿಶೀಲನೆಗೆ ಕಾಲಾವಕಾಶ ನೀಡಿ ಎಂದು ಸರ್ಕಾರದ ಪ್ರತಿನಿಗಳು ಗುತ್ತಿಗೆದಾರರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
