ಉದಯವಾಹಿನಿ ,ಶಿವಮೊಗ್ಗ: ವ್ಯಕ್ತಿಯ ಮೇಲೆ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಿ ಕೊಂದಿದ್ದ ಇಬ್ಬರು ಅಪರಾಧಿಗಳಿಗೆ ಶಿವಮೊಗ್ಗ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಮತ್ತು ಅಪರಾಧಿಗಳಾದ ಕುಮಾರ್ (57) ಹಾಗೂ ಕಾರ್ತಿಕ್ (28) ನಡುವೆ ಜಮೀನಿನ ವಿಚಾರವಾಗಿ ಈ ಹಿಂದೆ ಗಲಾಟೆಗಳು ನಡೆದಿದ್ದವು. ಇದೇ ದ್ವೇಷದ ಹಿನ್ನೆಲೆಯಲ್ಲಿ 03-12-2023ರಂದು ಇಬ್ಬರು ಸೇರಿ ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿ ಕುಳಿತಿದ್ದರು. ಈ ವೇಳೆ ಸ್ಕೂಟಿಯಲ್ಲಿ ಬರುತ್ತಿದ್ದ ಮಹೇಶಪ್ಪ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 120(ಬಿ), 341, 435, 302 ಹಾಗೂ 34ರಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ಪಿಐ ಸತ್ಯನಾರಾಯಣ ವೈ. ಅವರು ನಡೆಸಿ, ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆ ನಡೆಸಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್ ಅವರು ವಾದ ಮಂಡಿಸಿದ್ದರು. ವಿಚಾರಣೆಯ ವೇಳೆ ಆರೋಪಿತರ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಲ ಅವರು ಇಬ್ಬರು ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 57,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!