ಉದಯವಾಹಿನಿ ಮಸ್ಕಿ: ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬಸ್ ಚಾಲಕನಿಗೆ ಇಲ್ಲಿನ ಪಿಎಸ್‌ಐ ಮಣಿಕಂಠ ಅವರು ಠಾಣೆಗೆ ಕರೆಯಿಸಿ ಚಳಿ ಬಿಡಿಸಿರುವ ಘಟನೆ ಜರುಗಿದೆ. ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಸರ್ಕಾರಿ ಬಸ್ಸನ್ನು ರಸ್ತೆ ಬದಿ ನಿಲ್ಲಿಸದೆ, ನಡು ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ಪೊಲೀಸ್ ಸಿಬ್ಬಂದಿರೊಬ್ಬರು ಪ್ರಶ್ನೆ ಮಾಡಿದಕ್ಕೆ ಕುಡಿದ ಮತ್ತಿನಲ್ಲಿದ್ದ ಬಸ್ ಚಾಲಕ ಪೊಲೀಸ್ ಸಿಬ್ಬಂದಿಗೆ ನಿಂದನೆ ಮಾಡಿದ್ದು, ಅಲ್ಲದೇ ಸಂಚಾರ ನಿಯಮ ಉಲ್ಲಂಘಿಸಿ ಜನರಿಗೆ ತೊಂದರೆ ನೀಡಿದ್ದು, ಬಸ್ ಚಾಲಕ ವಿಶ್ವನಾಥ ಹಾಗೂ ಡಿಪೋ ಮ್ಯಾನೇಜರ ಅವರನ್ನು ಪಿಎಸ್‌ಐ ಮಣಿಕಂಠ ಅವರು ಠಾಣೆಗೆ ಕರೆಯಿಸಿ ಬುದ್ದಿವಾದ ಹೇಳಿ ಚಾಲಕನಿಗೆ ೫೦೦ ರೂಪಾಯಿ ದಂಡ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ಪೊಲೀಸ್ ಸಿಬ್ಬಂದಿಗೆ ನಿಂದನೆ ಮಾಡಿದ ಬಸ್ ಚಾಲಕನು ಸಾರ್ವಜನಿಕರ ಸಮ್ಮುಖದಲ್ಲಿ ಪೊಲೀಸ್ ಸಿಬ್ಬಂದಿಗೆ ಕ್ಷೇಮೆ ಯಾಚಿಸಿರುವ ದೃಶ್ಯ ಕಂಡು ಬಂದಿದೆ. ಈ ವೇಳೆ ಹಳೆ ಬಸ್ ಬಳಿ ಪಿಎಸ್‌ಐ ಮಣಿಕಂಠ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಳೆ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸನ್ನು ಚಾಲಕರು ನಡು ರಸ್ತೆ ನಿಲ್ಲಿಸಿ ಚಹಾ ಕುಡಿಯಲು ಹೋದಾಗ ತೊಂದರೆ ಉಂಟಾಗುತ್ತದೆ. ಅದಲ್ಲದೇ, ದ್ವಿಚಕ್ರ ವಾಹನಗಳನ್ನು ಮುಖ್ಯ ರಸ್ತೆ ಬಳಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ, ಪಟ್ಟಣದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
