
ಉದಯವಾಹಿನಿ ರಾಮನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಾಮನಗರ ತಾಲ್ಲೂಕು ಹಾಗೂ ಡಾ ಚಂದ್ರಮ್ಮ ದಯಾನಂದ ಸಾಗರ್ ಆಸ್ಪತ್ರೆ ಹಾರೋಹಳ್ಳಿ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವು ಬಿಡದಿ ವಲಯದ ಗಾಣಕಲ್ ಗ್ರಾಮದ ಸರಕಾರಿ ಹಿರಿಯಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ನಡೆಯಿತು.ಕಾರ್ಯಕ್ರಮವನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಚಿಕ್ಕಣ್ಣಯ್ಯ ಅವರು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಯೋಜನಾಧಿಕಾರಿ ಮುರಳೀಧರ ಮಾತನಾಡಿ, ಈ ವರ್ಷ ಸಂಘದ ಸದಸ್ಯರಿಗೆ ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಸಲುವಾಗಿ ತಾಲೂಕಿನಲ್ಲಿ 10 ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿದೆ . ಇದರ ಪ್ರಯೋಜನವನ್ನು ಸಂಘದ ಸದಸ್ಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇದರ ಜೊತೆಗೆ ಸಂಘದ ಸದಸ್ಯರಿಗೆ ಆರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ ಯೋಜನೆಯನ್ನು ನೋಂದಾವಣೆ ಮಾಡಿದ್ದೂ ಇದರಡಿಯಲ್ಲಿ ಒಬ್ಬ ಸದಸ್ಯರಿಗೆ 20 ಸಾವಿರ ರೂಗಳಂತೆ ಒಂದು ಕುಟುಂಬಕ್ಕೆ 1.2 ಲಕ್ಷ ಸೌಲಭ್ಯವಿದೆ. ಜನಮಂಗಳ ಉಪಕರಣ ಕಾರ್ಯಕ್ರಮದಡಿಯಲ್ಲಿ ಅಂಗವಿಕಲರಿಗೆ ಉಚಿತವಾಗಿ ಉಪಕರಣ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ದಯಾನಂದ ಸಾಗರ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ಕೃಷ್ಣರೆಡ್ಡಿ, ಡಾ.ಜಾಕಿರ್ ಹುಸೇನ್, ಶಾಲಾ ಮುಖ್ಯ ಶಿಕ್ಷಕ ಕೃಷ್ಣಯ್ಯ, ಒಕ್ಕೂಟ ಅಧ್ಯಕ್ಷರಾದ ರಾಜು, ಪ್ರೌಢ ಶಾಲಾ ಶಿಕ್ಷಕ ಹೊನ್ನೇಗೌಡ , ವಲಯ ಮೇಲ್ವಿಚಾರಕಿ ಅರ್ಚನಾ, ತಾಲೂಕು ನೋಡಲ್ ಅಧಿಕಾರಿ ದಿನೇಶ್ ಸೇರಿದಂತೆ ವಲಯದ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಸಾಮಾನ್ಯ ಕಾಯಿಲೆಗಳು, ಕಣ್ಣಿನ ತಪಾಸಣೆ, ಸ್ತ್ರೀ ರೋಗ ತಪಾಸಣೆ, ಕೀಲು ಮತ್ತು ಮೂಳೆ ರೋಗ ತಪಾಸಣೆಯನ್ನು ಮಾಡಲಾಯಿತು. ಒಟ್ಟು 330 ಮಂದಿ ಸದಸ್ಯರು ಪ್ರಯೋಜನವನ್ನು ಪಡೆದುಕೊಂಡರು.
