ಉದಯವಾಹಿನಿ ದೇವರಹಿಪ್ಪರಗಿ: ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಈಡೇರಿಕೆಗಾಗಿ ಅ.23 ಹಾಗೂ 24ರಂದು ಸಾಂಕೇತಿಕವಾಗಿ ಎರಡು ದಿನಗಳ ಕಾಲ ಅತಿಥಿ ಶಿಕ್ಷಕರು ಬೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಶಾಲೆ ತೋರೆಯೋಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ದಾನಪ್ಪ ಕಲಕೇರಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕಳೆದ 10-11ವರ್ಷಗಳಿಂದ ಕಡಿಮೆ ವೇತನ ಸೇವಾ ಭದ್ರತೆ, ಕೃಪಾಂಕ ಸೇರಿದಂತೆ ಹಲವಾರು ಸೌಲಭ್ಯಗಳಿಲ್ಲದೆ ಪ್ರಾಮಾಣಿಕತೆಯಿಂದ ಮಕ್ಕಳ ಶೈಕ್ಷಣಿಕ ಬದುಕನ್ನು ಕಟ್ಟಿಕೊಡುವಲ್ಲಿ ಕಾರ್ಯನಿರತರಾಗಿದ್ದೇವೆ.ಸರ್ಕಾರದ ಹಂತದಲ್ಲಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರತಿಯೊಂದು ಅಧಿಕಾರ ವರ್ಗಕ್ಕೂ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ.ಕಳೆದ ಮಾರ್ಚ ಹಾಗೂ ಜುಲೈ ತಿಂಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಪ್ರತಿಭಟನೆ ಹೋರಾಟ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳ ಕುರಿತು ಸಭೆ ನಡೆಸಿ ಸಚಿವರು ಭರವಸೆ ನೀಡಿದ್ದರು.ಆದರೆ ಇಲ್ಲಿಯವರೆಗೆ ಹಲವು ಬೆಳೆವಣಿಗೆಗಳು ಗತಿಸಿದರೂ ಅತಿಥಿ ಶಿಕ್ಷಕರ ಒಂದೂ ಭರವಸೆ ಈಡೇರಿಲ್ಲ.ಸರಕಾರ ಧೋರಣೆ ಖಂಡಿಸಿ ಸಾಮೂಹಿಕ ಹಾಗೂ ಸಾಂಕೇತಿಕವಾಗಿ ಎರಡು ದಿನಗಳ ಕಾಲ ರಾಜ್ಯದ ಎಲ್ಲ ಅತಿಥಿ ಶಿಕ್ಷಕರು ಶಾಲೆ ತೋರೆಯೋಣ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಡಿ ಎಮ್ ಕಲಕೇರಿ, ಎಸ್ ಎಸ್ ಬಿರಾದಾರ, ರಾಜು ಕರ್ನಾಳ, ಬಿ ಸಿ ಬೀರನೂರ, ಅಶ್ವಿನಿ ಕುರ್ತಳ್ಳಿ, ಸುಜಾತಾ ಕೆರೂಟಗಿ, ಶೋಭಾ ಬಿರಾದಾರ,ಬಿ ಎಚ್ ಹೊಸೂರ ಸೇರಿದಂತೆ ಹಲವಾರು ಜನ ಅತಿಥಿ ಶಿಕ್ಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!