ಉದಯವಾಹಿನಿ ರಾಮನಗರ: ಹೆಚ್.ಎಲ್. ನಾಗೇಗೌಡರ ಕನಸು ಜನಪದ ಸಾಹಿತ್ಯ, ಸಂಗೀತ. ಅವರು ಸಾಹಿತಿಗಳು, ಐ.ಎ.ಎಸ್. ಅಧಿಕಾರಿಗಳು ಸಹ ಆಗಿದ್ದರು. ನಾಗೇಗೌಡರಿಗೆ ಜನಪದದ ಬಗ್ಗೆ ಹೆಚ್ಚು ಪ್ರೀತಿ ಇತ್ತು. ಜಾನಪದವನ್ನು ಸಂಶೋಧನೆ ಮಾಡಿ ಉಳಿಸಿ, ಬೆಳೆಸಬೇಕು ಹಾಗೂ ಸಾವಿರಾರು ವರ್ಷಗಳಿಂದ ಇರುವ ಈ ಕಲೆಗಳನ್ನು ಜನರಿಗೆ ತೋರಿಸಬೇಕೆಂದು ಜಾನಪದ ಲೋಕವನ್ನು ಪ್ರಾರಂಭಿಸಿದರು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.ರಾಮನಗರದ ಜಾನಪದ ಲೋಕದಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್.ಎಲ್. ನಾಗೇಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಜಾನಪದ ಲೋಕ ನಿರ್ಮಾಣಕ್ಕೆ ಅನೇಕರು ಶ್ರಮಪಟ್ಟಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಕಾಡಿನಲ್ಲಿ ವಾಸಿಸುತ್ತಿರುವ ಗಿರಿಜನರ ಕುರಿತು ಇಲ್ಲಿ ತೋರಿಸಲಾಗಿದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಎಷ್ಟೋ ಜನರಿಗೆ ಕಲೆಗಳ ಕುರಿತು ಗೊತ್ತಿರುವುದಿಲ್ಲ. ಅವರೆಲ್ಲರೂ ಜಾನಪದ ಲೋಕಕ್ಕೆ ಭೇಟಿ ನೀಡಿದರೆ ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ತಿಳಿದುಕೊಳ್ಳಬಹುದಾಗಿದೆ ಎಂದರು.ಕರ್ನಾಟಕ ರಾಜ್ಯದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಇದೆ ಇದನ್ನು ಯುವಕರು ಉಳಿಸಿ, ಬೆಳೆಸಬೇಕು. ಸಾಹಿತ್ಯದಲ್ಲಿ ಅನೇಕರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ, ಸಂಸ್ಕೃತಿ ಅರ್ಥವಾಗಬೇಕಾದರೆ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು. ಯಾವುದೇ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ  ಕಡ್ಡಾಯವಾಗಿ ಕನ್ನಡ ಓದಲು ಬರೆಯಲು ಕಲಿಸಬೇಕು. ಇಲ್ಲದಿದ್ದರೆ ನಮ್ಮ ಸಾಹಿತ್ಯ ಸಂಸ್ಕೃತಿ ಮಕ್ಕಳಿಗೆ ಅರ್ಥವಾಗುವುದಿಲ್ಲ ಎಂದರು.ಸರ್ಕಾರದಿಂದ ಪ್ರಸಕ್ತ ಸಾಲಿನಲ್ಲಿ ಜಾನಪದ ಲೋಕವನ್ನು ಹೆಚ್ಚು ಆಕರ್ಷಿಸಲು ಜಾನಪದಲೋಕಕ್ಕೆ ಈಗಾಗಲೇ 2 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಅನುದಾನ ಕೊರತೆಯಿದ್ದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
 *ಜಾನಪದ ಲೋಕದ ಬಳಿ ಬಸ್‌ನಿಲ್ದಾಣ:*  
ಜಾನಪದ ಲೋಕಕ್ಕೆ ಅತೀ ಹೆಚ್ಚು ಜನಸಂಖ್ಯೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲೆಂದು ಜಾನಪದ ಲೋಕದ ಬಳಿ ಬಸ್‌ನಿಲ್ದಾಣವನ್ನು ನಿರ್ಮಿಸಿ, ವೇಗದೂತ ಬಸ್ಸುಗಳನ್ನು ಸಹ ಇಲ್ಲಿ ನಿಲುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಅವರು ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ, ಬೆಳೆಸಬೇಕು. ಮನುಷ್ಯನ ಆಚರಣೆಗಳನ್ನು ನಿರಾಕರಣೆ ಮಾಡುವಷ್ಟು ನಮ್ಮ ತಂತ್ರಜ್ಞಾನ ಬೆಳೆದಿದೆ. ತಂತ್ರಜ್ಞಾನವು ವಸ್ತುವನ್ನು ನೀಡುತ್ತದೆ. ಆದರೆ ನೆಮ್ಮದಿಯನ್ನು ನೀಡುವುದಿಲ್ಲ ಎಂದರು.ಭೂಮಿ ಹಾಗೂ ಆಕಾಶವು ತಾಯಿಯ ಸ್ವರೂಪ. ಹಾಗೆಯೇ ಜಾನಪದ ಕಲೆಗಳು ಸಹ ತಾಯಿ ಸ್ವರೂಪ. ಹೆಚ್.ಎಲ್ ನಾಗೇಗೌಡರು ತಾಯಿಯ ಪ್ರೀತಿಯನ್ನು ಹುಡುಕುವ ಮೂಲಕ ಜಾನಪದ ಸಂಸ್ಥೆಯನ್ನು ಕಟ್ಟಿದರು. ಹೆಚ್.ಎಲ್ ನಾಗೇಗೌಡರು ಕರ್ನಾಟಕ ರಾಜ್ಯದಲ್ಲಿ ಜಾನಪದ ಲೋಕವನ್ನು ನಿರ್ಮಾಣ ಮಾಡಿರುವುದು ಬಹಳ ದೊಡ್ಡ ಸಾಧನೆಯಾಗಿದೆ ಆದ್ದರಿಂದ ಈ ಜಾನಪದವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ನಿರ್ದೇಶಕರಾದ ಮೊಹಮ್ಮದ್ ಫರೂಕ್ ಅವರು ಜಾನಪದ ಲೋಕ ಪ್ರಾವಾಸಿ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಮುಖವೀಣೆ ಕಲಾವಿದರು ಹಾಗೂ ಜಾನಪದಶ್ರೀ ಪ್ರಶಸ್ತಿ ಪುರಸ್ಕೃತರಾದ ಮುಖವೀಣೇ ಆಂಜನಪ್ಪ ಅವರಿಗೆ ಸಚಿವರು ಸನ್ಮಾನ ಮಾಡಿದರು. ಇದೇ ವೇಳೆ ಮುಖವೀಣೇ ಆಂಜನಪ್ಪ ಅವರು ಮುಖವೀಣೆ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ರಾಮನಗರ ಶಾಖೆಯ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶಾಖಾ ಮಠಾಧೀಶರಾದ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ರಾಮನಗರ ವಿಧಾನ ಸಭಾ ಶಾಸಕರಾದ ಹೆಚ್. ಎ. ಇಕ್ಬಾಲ್ ಹುಸೇನ್, ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಾಗೇಶ್ ಬೆಟ್ಟಕೋಟೆ, ಜಾನಪದ ಲೋಕದ ಜಾನಪದ ಮಹಾವಿದ್ಯಾಲಯದ ಕನ್ನಡ ವಿಶ್ವವಿದ್ಯಾಲಯ ಶೈಕ್ಷಣಿಕ ನಿರ್ದೇಶಕರಾದ ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ರಾಮನಗರ ತಾಲೂಕು ತಹಶೀಲ್ದಾರರಾದ ತೇಜಸ್ವಿನಿ, ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!